ಶಿವಮೊಗ್ಗ,ಫೆ.೦೬: ಈ ಬಾರಿಯ ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ ಸಾಕಷ್ಟು ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಶಯ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರವು ಸೇರಿದಂತೆ ಎಲ್ಲಾ ಇಲಾಖೆಗಳ ಬಜೆಟ್ ಪೂರ್ವ ಸಭೆ ಇಂದು ನಡೆಯುತ್ತಿದೆ. ಅದರಲ್ಲಿ ನಾನು ಭಾಗವಹಿಸುತ್ತೇನೆ. ಈಗಾಗಲೇ ನನ್ನ ಇಲಾಖೆಗೆ ಸಂಬಂಧಪಟ್ಟಂತೆ ಹಲವು ವಿಷಯಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಒಳ್ಳೆಯ ರೀತಿಯ ಅನುದಾನ ಈ ಬಾರಿಯ ಬಜೆಟ್ನಲ್ಲಿ ನಿರೀಕ್ಷೆ ಇದೆ ಎಂದರು.
ಶಿಕ್ಷಣ ಇಲಾಖೆಯಲ್ಲಿ ಹಲವು ಬದಲಾವಣೆ, ಹಲವು ಕಲಿಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ವಿಷಯವನ್ನು ಕೂಡ ಸಭೆಯಲ್ಲಿ ಚರ್ಚಿಸಲಾಗುವುದು ಜೊತೆಗೆ ಜಿಲ್ಲೆಯ ಅಭಿವೃದ್ಧಿಗಾಗಿಯೂ ಪ್ರಯತ್ನಿಸಲಾಗುವುದು, ಮುಖ್ಯವಾಗಿ ನೀರಾವರಿ ಮತ್ತು ಆಡಳಿತಾತ್ಮಕ ಸುಧಾರಣೆಯ ಬಗ್ಗೆ ಚರ್ಚಿಸಲಾಗುತ್ತಿದೆ. ಮೆಗ್ಗಾನ್ ಆಸ್ಪತ್ರೆಯನ್ನು ಭೋಧನಾ ಆಸ್ಪತ್ರೆಯಿಂದ ಬೇರ್ಪಡಿಸಿ ಹೊಸ ರೀತಿಯಲ್ಲಿ ರೂಪಿಸುವ ಅವಶ್ಯಕತೆ ಇದೆ. ಈ ಬಗ್ಗೆಯೂ ನಾನು ಮಾತನಾಡುತ್ತೇನೆ ಎಂದರು.
ವಿಐಎಸ್ಲ್ ಬಗ್ಗೆ ರಾಜ್ಯ ಸರ್ಕಾರ ಯಾವುದೇ ಪ್ರಸ್ತಾಪ ಕೇಂದ್ರಕ್ಕೆ ತಂದಿಲ್ಲ ಎಂಬ ಆರೋಪವಿದೆ. ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಹೆಚ್.ಡಿ. ಕುಮಾರಸ್ವಾಮಿ ಅವರು ಎಂಪಿಎಂನ್ನು ನಾನು ಪುನಶ್ಚೇತನ ಮಾಡುತ್ತೇನೆ ಎಂದು ಚುನಾವಣೆಗೆ ಮುನ್ನವೇ ಘೋಷಣೆ ಮಾಡಿದ್ದಾರೆ. ಅವರು ರಾಜ್ಯವನ್ನು ಆಳಿದವರು. ಅವರಿಗೆ ಎಲ್ಲವೂ ಗೊತ್ತಿದೆ ಅಲ್ವಾ ? ಮಾತು ಕೊಟ್ಟಂತೆ ಮಾರ್ಯಾದೆಯಿಂದ ನಡೆದುಕೊಳ್ಳಬೇಕು. ರಾಜ್ಯ ಸರ್ಕಾರ ಈಗಾಗಲೇ ಗಣಿಭೂಮಿಯನ್ನು ನೀಡಿದೆ. ಕುಮಾರಸ್ವಾಮಿಯವರು ಅದನ್ನು ಪಡೆದುಕೊಳ್ಳಬೇಕು ಮತ್ತು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದರು.