ಶಿವಮೊಗ್ಗ: ಕಂಪ್ಯೂಟರ್, ಮೊಬೈಲ್ನ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಕಣ್ಣಿಗೆ ವಿಶ್ರಾಂತಿ ಇಲ್ಲದಿರುವುದು ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ. ದೀಪಾ ಹೇಳಿದರು.
ನಗರದ ಸಹ್ಯಾದ್ರಿ ಪ್ರೌಢಶಾಲೆಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ವತಿಯಿಂದ ಕಣ್ಣಿನ ಆರೋಗ್ಯದ ಜಾಗೃತಿ ಹಾಗೂ ಉಚಿತ ನೇತ್ರ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಆಧುನಿಕ ಉಪಕರಣ ಬಳಕೆಯು ಕಣ್ಣು ನೋವು ಹೆಚ್ಚಲು ಕಾರಣ. ಸಕಾಲದಲ್ಲಿ ಕಣ್ಣು ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯ. ಪ್ರೋಟಿನ್ಯುಕ್ತ ಆಹಾರ ಸೇವಿಸಬೇಕು. ಸರಿಯಾದ ನಿದ್ರೆ ಮಾಡಬೇಕು ಎಂದು ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ರೆಟಿನೋ, ರೆಟಿನೋಪತಿ, ಮ್ಯಾಕ್ಯುಲರ್ ಹಾಗೂ ಗ್ಲೊಕೊಮಾ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಬಾಲ್ಯದಲ್ಲೇ ಮಕ್ಕಳಿಗೆ ಕಣ್ಣಿನ ತಪಾಸಣೆ ಜತೆಗೆ ಅದರ ಅರಿವು ಮೂಡಿಸುವುದು ಅಗತ್ಯ ಎಂದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಗಣೇಶ್ ಮಾತನಾಡಿ, ಕಣ್ಣು ದೇಹದ ಪ್ರಮುಖ ಅಂಗ. ನಾವುಗಳು ಕಣ್ಣಿನ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಮಕ್ಕಳಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ ಉಚಿತ ತಪಾಸಣಾ ಶಿಬಿರ ಆಯೋಜಿಸಿದ್ದೇವೆ. ಕಣ್ಣಿನ ಬಗ್ಗೆ ಹೆಚ್ಚು ಜಾಗೃತಿ ಹೊಂದಬೇಕು ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿದ್ದ ಶ್ರೀನಿಧಿ ಎಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಶ್ರೀಕಂಠಯ್ಯ ಮಾತನಾಡಿ, ಆರು ತಿಂಗಳಿಗೊಮ್ಮೆ ಕಣ್ಣಿನ ಪರೀಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಆಡಳಿತಾಧಿಕಾರಿ ಟಿ.ಪಿ.ನಾಗರಾಜ, ಗುರುಮೂರ್ತಿ ಗೌಡ, ಮುಖ್ಯಶಿಕ್ಷಕ ಉಮ್ಮಸಲ್ಮ, ಕೆ.ಪಿ.ಕುಮಾರಸ್ವಾಮಿ, ಕಾರ್ಯದರ್ಶಿ ಮಂಜುನಾಥ ರಾವ್ ಕದಂ, ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಶೋಭಾ ಎಸ್.ಎನ್., ನಾಗರತ್ನ, 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.