ಶಿವಮೊಗ್ಗ : ಫೆಬ್ರವರಿ 01 : : ದೂರದೃಷ್ಟಿಯ ಕೇಂದ್ರ ಪುರಸ್ಕೃತ ಬುಡಕಟ್ಟು ಕಲ್ಯಾಣ ಯೋಜನೆಯ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ್ಅಭಿಯಾನ ಯೋಜನೆಯಡಿ ಜಿಲ್ಲೆಯ ಹಿಂದುಳಿದ ವಿರುಪಿನಕೊಪ್ಪ ಮತ್ತು ಸದಾಶಿವಪುರ ಗ್ರಾಮಗಳನ್ನು ಆಯ್ಕೆ ಮಾಡಿದ್ದು, ಈ ಗ್ರಾಮಗಳ ಸರ್ವಾಗೀಣ ವಿಕಾಸಕ್ಕೆ ಯೋಜನೆ ರೂಪಿಸಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ಅವರು ಹೇಳಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರವು ಈ ಯೋಜನೆಯಡಿ ಬುಡಕಟ್ಟು ಜನಾಂಗದ ಸದಸ್ಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಇದಾಗಿದ್ದು, ಬುಡಕಟ್ಟು ಜನಾಂಗದ ಬಹುಸಂಖ್ಯಾತರು ವಾಸಿಸುವ ಗ್ರಾಮಗಳಲ್ಲಿ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಲಾಗುವುದಲ್ಲದೇ ಮೂಲಭೂತ ಸೌಕರ್ಯ, ಆರೋಗ್ಯ, ಶಿಕ್ಷಣ ಮತ್ತು ಜೀವನೋಪಾಯ ಕೌಶಲ್ಯಗಳ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಿ, ಅನುಷ್ಠಾನಗೊಳಿಸಲಾಗುವುದು ಎಂದರು.
ವಿಶೇಷವಾಗಿ ನಗರದಿಂದ ಅತ್ಯಂತ ದೂರದಲ್ಲಿರುವ ಮತ್ತು ಹಿಂದುಳಿದ ಬುಡಕಟ್ಟು ಪ್ರದೇಶಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವುದು, ಇದರೊಂದಿಗೆ ಸರ್ಕಾರದ ಪ್ರಯತ್ನಗಳ ಸಂಯೋಜನೆ, ಪ್ರತ್ಯೇಕತೆಯನ್ನು ಹೋಗಲಾಡಿಸಿ, ಪರಿಣಾಮಕಾರಿ ಬದಲಾವಣೆಗಾಗಿ ಒಮ್ಮತ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.
ಬಹು ಮುಖ್ಯವಾಗಿ ವಸತಿ ಗೃಹಗಳ ನಿರ್ಮಾಣ, ಮನೆಗಳಿಗೆ ವಿದ್ಯುದ್ದೀಕರಣ, ಹೊಸ ಸೌರಶಕ್ತಿ ಅಳವಡಿಕೆ, ಆರೋಗ್ಯ ಸೇವೆ, ಅರಣ್ಯ ಹಕ್ಕು ಕಾಯ್ದೆಯಡಿ ಪಟ್ಟಾ ಹೊಂದಿರುವವರಿಗೆ ಸುಸ್ಥಿರ ಕೃಷಿಗೆ ಉತ್ತೇಜನ ಒದಗಿಸುವುದು, ಬುಡಕಟ್ಟು ಹೋಂ ಸ್ಟೇಗಳ ನಿರ್ಮಾಣ, ಗ್ರಾಮಗಳಿಗೆ ಸಂಪರ್ಕ ರಸ್ತೆ ಜೋಡಣೆ, ಅಂಗನವಾಡಿ ಸೇವೆಗಳು, ಮತ್ಸ್ಯೋದ್ಯಮಕ್ಕೆ ಉತ್ತೇಜನ, ಶುದ್ಧ ಕುಡಿಯುವ ನೀರಿನ ಸೌಲಭ್ಯ, ಬುಡಕಟ್ಟು ಜನಾಂಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ,, ಅಲ್ಲಿನ ನಿವಾಸಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ, ಗ್ರಾಮಗಳಿಗೆ ದೂರವಾಣಿ ಸಂಪರ್ಕ ಸೌಲಭ್ಯ ಒದಗಿಸುವುದಲ್ಲದೇ ಜಿಲ್ಲೆಯಲ್ಲಿ ಕೌಶಲ್ಯೀಕರಣ ಕೇಂದ್ರಗಳನ್ನು, ಬ್ಯಾಂಕ್ಖಾತೆಗಳನ್ನು, ಸಮುದಾಯದ ಗುಂಪುಗಳನ್ನು ಸೃಜಿಸುವುದು ಕೂಡ ವಿಸ್ತೃತ ಯೋಜನೆಯ ಭಾಗವಾಗಿದೆ ಎಂದರು.
ಆಯ್ಕೆಗೊಂಡ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಗ್ರಾಮದ ಅಗತ್ಯತೆಗಳ ಪಟ್ಟಿಮಾಡಿ, ಕೈಗೊಳ್ಳಬಹುದಾದ ಕ್ರಮಗಳು ಹಾಗೂ ಸಾಧಕ-ಬಾದಕಗಳ ಬಗ್ಗೆ ಮಾಹಿತಿ ಹೊಂದಿದ್ದು, ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ತಕ್ಷಣದ ಮಾಹಿತಿ ನೀಡುವಂತೆ ಸೂಚಿಸಿದ ಅವರು, ಅಗತ್ಯವಿರುವೆಡೆಗಳಲ್ಲಿ ಅಂಗನವಾಡಿ ಕೇಂದ್ರಗಳು, ಶಾಲೆಗಳ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಸಂಬಂಧಿಸಿದ ತಾಲೂಕುಗಳ ತಹಶೀಲ್ದಾರರು ಅಲ್ಲಿನ ಗ್ರಾಮಸ್ಥರಿಗೆ ತ್ವರಿತವಾಗಿ ಜಾತಿ ಪ್ರಮಾಣಪತ್ರಗಳನ್ನು, ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಆಧಾರ್ಕಾರ್ಡ್ಗಳನ್ನು ಮಾಡಿಸಿಕೊಡಬೇಕು. ಅದಕ್ಕಾಗಿ ಇಲಾಖಾಧಿಕಾರಿಗಳು ಒಂದು ದಿನಾಂಕವನ್ನು ನಿಗಧಿಗೊಳಿಸಿ, ಗ್ರಾಮಸ್ಥರಿಗೆ ಮುಂಚಿತವಾಗಿ ತಿಳಿಸಿ, ಗ್ರಾಮಕ್ಕೆ ಖುದ್ದು ಭೇಟಿ ನೀಡಿ, ಅಲ್ಲಿನ ಅಗತ್ಯತೆಗಳನ್ನು ಒದಗಿಸಿ ಬರುವಂತೆ ಸೂಚಿಸಿದರು.
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸುವುದು, ಶಾಲೆಗಳಿರುವಲ್ಲಿ ಅಲ್ಲಿನ ಶೌಚಾಲಯ, ಶಾಲಾ ಕಾಂಪೌಂಡ್ನಿರ್ಮಾಣಕ್ಕೆ ಕ್ರಮ, ರಸ್ತೆ ಸಂಪರ್ಕ ಸೌಲಭ್ಯ ಕಲ್ಪಿಸಲು ಅಡಚಣೆ ಇದ್ದಲ್ಲಿ ಕ್ರಿಯಾಯೋಜನೆ ತಯಾರಿಸಿ, ಸಲ್ಲಿಸುವಂತೆ ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಸೂಚಿಸಿದ ಅವರು, ಅಲ್ಲಿನ ನಿವಾಸಿಗಳ ಆರೋಗ್ಯ ಸುಧಾರಣೆಗಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪರಿಶಿಷ್ಟ ಜಾತಿ ವರ್ಗಗಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಜಯಲಕ್ಷ್ಮಮ್ಮ, ಯೋಜನಾ ನಿರ್ದೇಶಕಿ ಶ್ರೀಮತಿ ನಂದಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಟರಾಜ್ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.