ಶಿವಮೊಗ್ಗ: ತಲೆಮರೆಸಿಕೊಂಡಿದ್ದ ನಕ್ಸಲ್ ರವೀಂದ್ರ ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗತಿಯಾಗಿದ್ದಾರೆ.
ಕೋಟೆಹೊಂಡ ರವಿ ಅಲಿಯಾಸ್ ರವೀಂದ್ರ ನೆಮ್ಮಾರ್ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ 4 ಕಿಮೀ ದೂರದಲ್ಲಿನ ಅರಣ್ಯ ಇಲಾಖೆ ಐಬಿಯಲ್ಲಿ ಪೊಲೀಸರ ಮುಂದೆ ಶರಣಾಗತಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ನಕ್ಸಲ್ ಯುಗ ಬಹುತೇಕ ಅಂತ್ಯವಾಗಿದೆ.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಎಸ್ಪಿ ವಿಕ್ರಮ್ ಆಮಟೆ ಎದುರು ಶರಣಾಗತಿಯಾಗಿದ್ದು, ಈ ಸಂದರ್ಭದಲ್ಲಿ ನಕ್ಸಲ್ ಶರಣಾಗತಿ ಸಮಿತಿ ಸದಸ್ಯರು ಜೊತೆಗಿದ್ದರು.
ರಾಜ್ಯದಲ್ಲಿ ವಿಕ್ರಂ ಗೌಡ ಎನ್ಕೌಂಟರ್ ಬಳಿಕ ಉಳಿದಿದ್ದ ಏಕೈಕ ನಕ್ಸಲ್ ರವೀಂದ್ರ ನಾಪತ್ತೆಯಾಗಿದ್ದರು. ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ಇವರು ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ಗ್ರಾಮದವರಾಗಿದ್ದಾರೆ. ನಕ್ಸಲ್ ಶರಣಾಗತಿ ಸಮಿತಿಯ ಕೆ.ಪಿ. ಶ್ರೀಪಾಲ್ ನೇತೃತ್ವದಲ್ಲಿ ಇವರು ಶರಣಾಗತಿಯಾಗಿದ್ದು, ನಾಳೆ ಮತ್ತೋರ್ವ ನಕ್ಸಲ್ ಮಹಿಳೆ ಲಕ್ಷ್ಮಿ ಶರಣಾಗತಿಯಾಗುವ ಸಾಧ್ಯತೆ ಇದೆ.
ಇತ್ತೀಚೆಗಷ್ಟೇ ಶರಣಾದ 6 ಮಂದಿ ನಕ್ಸಲರ ತಂಡದಲ್ಲಿದ್ದ ರವಿ ವಿಕ್ರಂ ಗೌಡ ಎನ್ಕೌಂಟರ್ ಸಂದರ್ಭದಲ್ಲಿ ತಂಡದಿಂದ ಬೇರ್ಪಟ್ಟಿದ್ದರು. ಇದೀಗ ಪೊಲೀಸರ ಮುಂದೆ ಶರಣಾಗಿದ್ದು, ಪಶ್ಚಿಮಘಟ್ಟದಲ್ಲಿ ಶಸ್ತ್ರಾಸ್ತ್ರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಎಲ್ಲಾ ಮಾವೋವಾದಿಗಳು ಮುಖ್ಯವಾಹಿನಿಗೆ ಬಂದಂತಾಗಿದೆ.