ಶಿವಮೊಗ್ಗ: ಡಿ.೦5 ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಗಳ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರು ಗಮನಹರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್ ವಿಷಯ ಎಲ್ಲವೂ ಸುಸೂತ್ರವಾಗಿ ಬಗೆಹರಿಯುತ್ತದೆ. ಪರಸ್ಪರ ಕಚ್ಚಾಡುವುದರಿಂದ ಯಾರಿಗೂ ಲಾಭವಿಲ್ಲ. ಎಲ್ಲರೂ ಕುಳಿತುಕೊಂಡು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ಒಟ್ಟಾಗಿ ಹೋಗುವುದರಿಂದ ಸಾಧನೆ ಮಾಡಲು ಸಾಧ್ಯ ಎಂದರು.
ಬೆಳಗಾವಿಯಲ್ಲಿ ಆರಂಭವಾಗಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ ಕುರಿತು ವಿರೋದ ಪಕ್ಷಗಳು ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದ ಅವರು, ಕಾಂಗ್ರೆಸ್ ಸಮಾವೇಶಕ್ಕೆ ಸಂಬಂಧಿಸಿದಂತೆ ಅದು ಆ ಪಕ್ಷದ ಸಮಾವೇಶ. ಅವರು ಏನಾದರೂ ಮಾಡಿಕೊಳ್ಳಲಿ ಎಂದರು.
ಸಿಎಂ ಸಿದ್ಧರಾಮಯ್ಯ ವಿರುದ್ಧ ಇಡಿ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇಡಿಗೆ ಪೂರ್ಣ ಅಧಿಕಾರ ಇದೆ. ಅದು ಏನು ತೀರ್ಮಾನ ತೆಗೆದುಕೊಳ್ಳುತ್ತದೊ ಅದೇ ಅಂತಿಮವಾಗುತ್ತದೆ. ಸಿದ್ಧರಾಮಯ್ಯ ವಿರುದ್ಧ ಸಾಕ್ಷ್ಯಾಧಾರಗಳು ಸಿಕ್ಕಿವೆ. ಆದ್ದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ರೀತಿಯ ಹೇಳಿಕೆಯನ್ನು ಕೊಡುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ಮುಖ್ಯಮಂತ್ರಿಯಾಗಿ ಇಡಿಗೆ ಗೌರವ ಕೊಡುವುದನ್ನು ಕಲಿಯಬೇಕು ಎಂದರು.
ವಿಶ್ವವಿದ್ಯಾಲಯ ಆಡಳಿತಾತ್ಮಕ ವಿಚಾರದಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ಸರ್ಕಾರದ ನಿಲುವಿನ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಸರ್ಕಾರ ಈ ಕುರಿತಂತೆ ವ್ಯತಿರಿಕ್ತ ತೀರ್ಮಾನ ತೆಗೆದುಕೊಂಡಿದೆ. ಇದು ಒಳ್ಳೆಯದಲ್ಲ ಎಂದರು.