ಸೊರಬ: ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಗುತ್ತಿಗೆದಾರರು ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಎಂ.ಡಿ. ಉಮೇಶ್ ಹೇಳಿದರು.
ಪಟ್ಟಣದ 11 ನೇ ವಾರ್ಡ್‌ನ ಅಂಬೇಡ್ಕರ್ ಬಡಾವಣೆಯ ಉರ್ದು ಪ್ರಾಥಮಿಕ ಶಾಲೆಯ ಹಿಂಬದಿಯಿಂದ ಮಹಾಲಿಂಗಪ್ಪರವರ ಮನೆಯವರೆಗೆ ಹಾಗೂ ಮುನ್ಸಿಪಲ್ ಕಚೇರಿ ಪಕ್ಕದಿಂದ ಮಾರ್ಕೆಟ್ ರಸ್ತೆಯವರೆಗೆ ಎಸ್‌ಎಫ್‌ಸಿ ಎಸ್ಸಿಎಸ್ಪಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಮರುಡಾಂಬರೀಕಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪಟ್ಟಣ ಪಂಚಾಯ್ತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ್ದು, ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು.
ಪುರಸಭೆ ಸದಸ್ಯೆ ಶ್ರೀರಂಜನಿ ಪ್ರವೀಣ್ ಕುಮಾರ್ ಮಾತನಾಡಿ, ಇಲ್ಲಿನ ಮಾರ್ಕೆಟ್ ರಸ್ತೆಯಿಂದ ಅಂಬೇಡ್ಕರ್ ಬಡಾವಣೆಗೆ ಹೋಗುವ ರಸ್ತೆಯು ಮಳೆಗಾಲ ಬಂತೆಂದರೆ ಉರ್ದು ಪ್ರೌಢ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯ್ತಿಯಿದ್ದಾಗಲೂ ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದೆನು. ಇದೀಗ ರಸ್ತೆ ನಿರ್ಮಾಣವಾಗುತ್ತಿರುವುದು ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ವಾರ್ಡ್‌ನ ಜನತೆಯು ಸಹ ಜವಾಬ್ದಾರಿ ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶೆಲ್ಜಾ ನಾಯ್ಕ್, ಗುತ್ತಿಗೆದಾರ ಪ್ರಕಾಶ್ ಚೀಲೂರು, ಡಿ.ಎಸ್. ಪ್ರವೀಣ್ ಕುಮಾರ್ ದೊಡ್ಮನೆ ಸೇರಿದಂತೆ ಇತರರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!