ಆ, 30, ಶಿವಮೊಗ್ಗ : ಧ್ಯಾನ್ ಚಂದ್ ಅವರು ಸಾರ್ವಕಾಲಿಕ ಅತ್ಯುತ್ತಮ ಹಾಕಿ ಆಟಗಾರರಲ್ಲಿ ಒಬ್ಬರು ಎಂದು ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾ. ಹ. ತಿಮ್ಮೇನಹಳ್ಳಿ ಅಭಿಪ್ರಾಯ ಪಟ್ಟರು.
ಅವರು ನಿನ್ನೆ ಕೋಟೆ ರಸ್ತೆಯ ಮಹಾವೀರ ವಿದ್ಯಾಲಯದಲ್ಲಿ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಧ್ಯಾನ್ ಚಂದ್ ಅವರ 119ನೇ ಜನ್ಮದಿನದ ನಿಮಿತ್ತ ರಾಷ್ಟ್ರೀಯ ಕ್ರೀಡಾ ದಿನಾಚರಣೆಯನ್ನು ಆಚರಿಸಿ ಮಾತನಾಡಿದ
ಅವರು, ಧ್ಯಾನ್ ಚಂದ್ ಗೋಲುಗಳನ್ನು ಗಳಿಸಲು ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದರು, ಇದರಿಂದಾಗಿ ಭಾರತವು 1928, 1932 ಮತ್ತು 1936 ರ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಹಾಕಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿತು. ಅವರ ಯುಗವನ್ನು ಭಾರತೀಯ ಹಾಕಿಯ “ಸುವರ್ಣ ಅವಧಿ” ಎಂದು ಕರೆಯಲಾಗುತ್ತದೆ ಎಂದರು.
ಮೇಜರ್ ಧ್ಯಾನ್ ಚಂದ್ರರ ಹುಟ್ಟಿದ ದಿನವಾದ 29ನೇ ಆಗಸ್ಟ್ ಭಾರತೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಷ್ಟ್ರಪತಿಗಳು ಕ್ರೀಡಾ ಜಗತ್ತಿನಲ್ಲಿ ಅನೇಕ ಸಾಧನೆ ಮಾಡಿದವರಿಗೆ ಖೇಲ್ ರತ್ನ ಪ್ರಶಸ್ತಿ, ಅರ್ಜುನ್ ಪ್ರಶಸ್ತಿ, ದ್ರೋಣಾಚಾರ್ಯ
ಪ್ರಶಸ್ತಿ ಮುಂತಾದ ಕ್ರೀಡಾ ಸಾಹಸ ತೋರಿದವರಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರತಿವರ್ಷವೂ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದರು.
ಸಂಘದ ಕಾರ್ಯದರ್ಶಿಯಾದ ಕೆ.ಜಿ. ಮಠಪತಿ, ಎಸ್.ಆರ್. ಸೋಮಶೇಖರ್, ಕುಮಾರಸ್ವಾಮಿ, ಯೋಗೇಶ್, ಯೂಸುಫ್,ಇನ್ನೂ ಮುಂತಾದವರು ಉಪಸ್ಥಿತರಿದ್ದರು.