
ಶಿವಮೊಗ್ಗ: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಜೀವಮಾನ ಸಾಧನಾ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಹಾಗೂ ‘ದಿ ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಅವಾರ್ಡ್’ ಪಡೆದ ಪಿ. ಜೇಸುದಾಸ್ ಅವರನ್ನು ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸನ್ಮಾನಿಸಲಾಯಿತು.

‘ಶಿವಮೊಗ್ಗ ಟೈಮ್ಸ್’ ಸಂಪಾದಕ ಎಸ್. ಚಂದ್ರಕಾಂತ್ ಮಾತನಾಡಿ, ಜೇಸುದಾಸ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ಸಂತಸ ತಂದಿದೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದಾಗಲೇ ಅಲ್ಲಿನ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ್ದ ಜೇಸುದಾಸ್ ಅವರಿಗೆ ಪತ್ರಕರ್ತರ ಸಂಘ ಬೆಂಬಲ ನೀಡಿತ್ತು. ಅವರು ಸರಳ, ಸಜ್ಜನ ವ್ಯಕ್ತಿ ಎಂದರು.

ಮೊಳೆ ಜೋಡಿಸಿ ಪತ್ರಿಕೆ ಮುದ್ರಿಸುತ್ತಿದ್ದ ಕಾಲದಿಂದಲೂ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದೇವೆ. ಅಂದು ಸುದ್ದಿ ಸಂಗ್ರಹಿಸಲು ಪತ್ರಕರ್ತರು ಸಾಕಷ್ಟು ಶ್ರಮಿಸಬೇಕಿತ್ತು. ಈಗ ವಾಟ್ಸ್ಆ್ಯಪ್ನಲ್ಲಿ ಸುದ್ದಿಗಳನ್ನು ಪಡೆದುಕೊಳ್ಳುವ ಕಾಲ ಬಂದಿದೆ. ಕಾಲ ಬದಲಾದಂತೆ ಪತ್ರಿಕೋದ್ಯಮದ ಸ್ವರೂಪವೂ ಬದಲಾಗಿದೆ ಎಂದು ಹೇಳಿದರು.

ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಜೇಸುದಾಸ್ ಮಾತನಾಡಿ, ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದಾಗ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ವಿಶ್ವವಿದ್ಯಾಲಯದಿಂದ ಹೊರಹಾಕುವ ಪರಿಸ್ಥಿತಿ ಎದುರಾಗಿತ್ತು. ಆಗ ಪತ್ರಕರ್ತರ ಸಂಘ ಹಾಗೂ ಅಂದಿನ ಸಂಘದ ಅಧ್ಯಕ್ಷರಾಗಿದ್ದ ಎನ್. ಮಂಜುನಾಥ ಅವರು ಬೆಂಬಲ ನೀಡಿದ್ದು ಮರೆಯಲಾಗದ ಅನುಭವ. ಪ್ರಶಸ್ತಿಯ ಸಂತೋಷವನ್ನು ಪತ್ರಿಕಾ ಮಿತ್ರರ ಪ್ರೀತಿ ಇಮ್ಮಡಿಗೊಳಿಸಿದೆ ಎಂದರು.

ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ಹಾಗೂ ಜೇಸುದಾಸ್ ಅವರಿಗೆ ದಕ್ಷಿಣ ಭಾರತದ ಮಟ್ಟದ ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿ ಲಭಿಸಿರುವುದು ಪತ್ರಿಕಾ ಬಳಗಕ್ಕೆ ಸಂತಸ ತಂದಿದೆ. ಚಂದ್ರಕಾಂತ್ ಅವರು ಪತ್ರಿಕೋದ್ಯಮಕ್ಕೆ ಸಲ್ಲಿಸಿರುವ ಸೇವೆ ಅನುಕರಣೀಯ. ಜೇಸುದಾಸ್ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ವರದಿಗಳನ್ನು ಸಿದ್ಧಪಡಿಸುತ್ತಿದ್ದು, ಈವರೆಗೆ 950ಕ್ಕೂ ಹೆಚ್ಚು ವಿಶೇಷ ಸುದ್ದಿಗಳನ್ನು ಮಾಡಿದ್ದಾರೆ. ದಶಕಗಳ ಹಿಂದಿನ ವಿಡಿಯೊಗಳನ್ನೂ ಸಂಗ್ರಹಿಸಿಟ್ಟಿದ್ದಾರೆ. ಈ ಪ್ರಶಸ್ತಿಗಳು ಅವರ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿವೆ ಎಂದರು.

ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಮಾತನಾಡಿ, ಪತ್ರಿಕೋದ್ಯಮದಲ್ಲಿ ಐದು ದಶಕಗಳ ಸೇವೆ ಸಲ್ಲಿಸಿರುವ ಚಂದ್ರಕಾಂತ್ ಹಾಗೂ ಸುದ್ದಿಯ ಬೆನ್ನುಹತ್ತಿ ಅದರ ಆಳವನ್ನು ವಿಶ್ಲೇಷಿಸುವ ಜೇಸುದಾಸ್ ಅವರ ಕಾರ್ಯ ಯುವ ಪತ್ರಕರ್ತರಿಗೆ ಮಾದರಿ. ಚಂದ್ರಕಾಂತ್ ಅವರ ಸ್ಮರಣಶಕ್ತಿ ಹಾಗೂ ಜೇಸುದಾಸ್ ಅವರ ಸುದ್ದಿ ವಿಶ್ಲೇಷಣೆಯ ವೈಖರಿ ವಿಶಿಷ್ಟವಾದುದು. ಅನುಭವ ಮತ್ತು ಹಿರಿತನವನ್ನು ತಲೆಗೆ ಏರಿಸಿಕೊಳ್ಳದ ಅವರ ಗುಣ ಅನುಕರಣೀಯ ಎಂದರು.

ಶಾಸಕಿ ಶಾರದಾ ಪೂರ್ಯಾನಾಯ್ಕ್ ರಿಂದ ಸನ್ಮಾನ
ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಎಸ್. ಚಂದ್ರಕಾಂತ್ ಅವರು ತಳಮಟ್ಟದಿಂದ ಬೆಳೆದು ಐದು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಇನ್ನೂ ಮೊದಲೇ ಇಂತಹ ಪ್ರಶಸ್ತಿಗಳು ಲಭಿಸಬೇಕಿತ್ತು. ಜೇಸುದಾಸ್ ಅವರು ತಮ್ಮ ಆತ್ಮೀಯ ಗೆಳೆಯರಾಗಿದ್ದು, ಅವರ ಸಾಧನೆಯೂ ಹೆಮ್ಮೆಯ ಸಂಗತಿ ಎಂದರು.
ಪತ್ರಕರ್ತರಾದ ಎಸ್.ಕೆ. ಗಜೇಂದ್ರ ಸ್ವಾಮಿ, ಹೊನ್ನಾಳಿ ಚಂದ್ರಶೇಖರ್, ಸಂತೋಷ್ ಕಾಚಿನಕಟ್ಟೆ, ಮೋಹನ್ ಕೃಷ್ಣ, ಶಿ. ಜು. ಪಾಷಾ, ರಾಮಚಂದ್ರ ಗುಣಾರಿ, ನವೀನ್ ಪುರದಾಳ್, ಸೌಮ್ಯ ಮತ್ತಿತರರು ಇದ್ದರು.