ಸ್ಟಿಂಗ್ ಆಪರೇಷನ್;
ಸಿಬಿಐ, ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಶಾರದಾ ಪೂರ್ಯನಾಯ್ಕ ಆಗ್ರಹ
ಶಿವಮೊಗ್ಗ: ರಾಜಕೀಯ ಲಾಭಕ್ಕಾಗಿ ಸ್ಟಿಂಗ್ ಆಪರೇಷನ್ಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ. ಪ್ರಕರಣದ ಹಿಂದೆ ಇರುವವರು ಹಾಗೂ ಸೂತ್ರಧಾರರನ್ನು ಪತ್ತೆಹಚ್ಚಲು ಸಿಬಿಐ ಅಥವಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಶಾಸಕಿ ಶಾರದಾ ಪೂರ್ಯನಾಯ್ಕ್ ಆಗ್ರಹಿಸಿದರು.
ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಟೀಕೆ, ಆರೋಪಗಳು ಸಹಜ. ಆದರೆ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ತೇಜೋವಧೆ ಮಾಡುವುದು ಸರಿಯಲ್ಲ. ಮಹಿಳೆಯರಿಗೆ ಸಂಬಂಧಿಸಿದ ವಿಚಾರಗಳನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದು ಇಡೀ ಮಹಿಳಾ ಸಮಾಜಕ್ಕೆ ನೋವುಂಟು ಮಾಡುವ ಬೆಳವಣಿಗೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬವನ್ನೂ ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ಗಳು ಹಾಗೂ ಕೃತಕ ಬುದ್ಧಿಮತ್ತೆ (ಎಐ) ಬಳಸಿ ಸೃಷ್ಟಿಸಲಾಗುವ ವಿಚಾರಗಳು ಮುನ್ನೆಲೆಗೆ ಬರುತ್ತಿರುವುದು ಆತಂಕಕಾರಿ. ಪ್ರಕರಣದಲ್ಲಿ ಕೆಲವರು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿರುವಾಗ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳದಿರುವುದೇಕೆ ಎಂದು ಪ್ರಶ್ನಿಸಿದರು.
ಪ್ರಕರಣದ ಹಿಂದೆ ಯಾರಿದ್ದಾರೆ, ಯಾವ ಉದ್ದೇಶದಿಂದ ಕೃತ್ಯ ಎಸಗಲಾಗಿದೆ ಎಂಬುದನ್ನು ತನಿಖೆಯಿಂದ ಬಹಿರಂಗಪಡಿಸಬೇಕು. ಸರ್ಕಾರ ಕೂಡಲೇ ಸೂಕ್ತ ತನಿಖೆಗೆ ವಹಿಸಬೇಕು. ಈ ವಿಚಾರವಾಗಿ ರಾಜ್ಯಾದ್ಯಂತ ಜೆಡಿಎಸ್ ಪ್ರತಿಭಟನೆ ನಡೆಸಿ, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ನ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಎನ್ಡಿಎ ನಾಲ್ಕೂ ಸ್ಥಾನಗಳನ್ನು ಗೆದ್ದಿದೆ. ಒಂದು ಸ್ಥಾನದಲ್ಲಿ ಜೆಡಿಎಸ್ನ ರಂಗನಾಥ್ ಸ್ಪರ್ಧಿಸಿದ್ದು, ಉಳಿದ ಮೂರು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶಿಕ್ಷಕರು ಮತ್ತು ಪದವೀಧರರು ತಮ್ಮ ತೀರ್ಪಿನ ಮೂಲಕ ರಾಜಕೀಯಕ್ಕೆ ಉತ್ತರ ನೀಡಿದ್ದಾರೆ ಎಂದರು.
ಜಂಬೂ ಸವಾರಿ ಸಂದರ್ಭದಲ್ಲಿ ಸೋಮಣ್ಣ ಆನೆ ಬೆದರಿದ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಆನೆ ಯಾರ ಮೇಲೂ ದಾಳಿ ಮಾಡದೆ, ವ್ಯಕ್ತಿಗಳಿಗೆ ಹಾನಿಯಾಗದಿರುವುದು ಸಮಾಧಾನಕರ. ಆದರೆ ವಾಹನಗಳಿಗೆ ಹಾನಿಯಾಗಿರುವುದು ನೋವು ತಂದಿದೆ ಎಂದರು.
ಘಟನೆಯಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಯಾರನ್ನು ಹೊಣೆ ಮಾಡಬೇಕು ಎಂಬುದಕ್ಕಿಂತ, ಇಂತಹ ಅವಘಡಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವುದು ಮುಖ್ಯ. ಘಟನೆಯ ಕುರಿತು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎನ್. ರಾಮಕೃಷ್ಣ, ಮಾಜಿ ಅಧ್ಯಕ್ಷ ಡಾ. ಕಡಿದಾಳ್ ಗೋಪಾಲ್, ಗೀತಾ ಸತೀಶ್, ನರಸಿಂಹ ಗಂಧದ ಮನೆ, ದೀಪಕ್ ಸಿಂಗ್, ತಿಪ್ಪೇಸ್ವಾಮಿ, ಡಿ. ಕಾಂತರಾಜ್, ಹೆಚ್. ಎಂ. ಸಂಗಯ್ಯ, ನಿಖಿಲ್, ತ್ಯಾಗರಾಜ್ ಉಪಸ್ಥಿತರಿದ್ದರು.
ಸ್ಟಿಂಗ್ ಸುಳ್ಳಾದರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ
ಸ್ಟಿಂಗ್ ಆಪರೇಷನ್ ಸುಳ್ಳು ಎಂದು ಸರ್ಕಾರವೇ ಹೇಳುತ್ತಿದ್ದರೆ, ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಸವಾಲು ಹಾಕಿದರು.ಸಿದ್ದರಾಮಯ್ಯ ಅವರ ಮೊದಲ ಐದು ವರ್ಷಗಳ ಆಡಳಿತದಲ್ಲಿ ತಾವು ಶಾಸಕರಾಗಿದ್ದೆ. ಹಿಂದುಳಿದ ವರ್ಗಗಳ ನಾಯಕರಾದ ಸಿದ್ದರಾಮಯ್ಯ ಅವರು ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ಕಂಡಿದ್ದಾರೆ. ಅಂತಹ ನಾಯಕನನ್ನು ಸ್ಟಿಂಗ್ ಆಪರೇಷನ್ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು. ಈಗ ಸರ್ಕಾರವೇ ಸ್ಟಿಂಗ್ ಸುಳ್ಳು ಎಂದು ಹೇಳುತ್ತಿದೆ. ಹಾಗಾದರೆ ಸಿದ್ದರಾಮಯ್ಯ ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧವಿದೆಯೇ ಎಂದು ಪ್ರಶ್ನಿಸಿದರು.
ಹೊಂದಾಣಿಕೆ ಬಗ್ಗೆ ಇನ್ನೂ ಸಭೆಯಾಗಿಲ್ಲಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಜತೆ ಹೊಂದಾಣಿಕೆ ಕುರಿತು ಇನ್ನೂ ಸಭೆ ನಡೆದಿಲ್ಲ. ಹೈಕಮಾಂಡ್ ಹಾಗೂ ಹಿರಿಯ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಅಂತಿಮವಾಗಿ ಯಾರಿಗೆ ಮತ ನೀಡಬೇಕು ಎಂಬುದನ್ನು ಮತದಾರರೇ ನಿರ್ಧರಿಸುತ್ತಾರೆ ಎಂದು ಶಾಸಕಿ ಶಾರದಾ ಪೂರ್ಯನಾಯ್ಕ ಹೇಳಿದರು