ಶಿವಮೊಗ್ಗ: ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಪ್ರಸೂತಿ ಅರಿವಳಿಕೆ ಸೇವೆಗಳ ಅಂತರ ಕಡಿಮೆ ಮಾಡಿ, ಸುರಕ್ಷಿತ ಮಾತೃತ್ವಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಪ್ರಸೂತಿ ಅರಿವಳಿಕೆ ತಜ್ಞರ ಸಂಘದ (ಎಒಎ) 19ನೇ ರಾಷ್ಟ್ರೀಯ ಸಮ್ಮೇಳನ ‘ಎಒಎಕಾನ್–2026’ ಅನ್ನು ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಅಧ್ಯಕ್ಷ ಡಾ. ಜಿ.ಎಲ್. ರವೀಂದ್ರ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 30ರಿಂದ ನ. 1ರವರೆಗೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಸಿಮ್ಸ್)ಯಲ್ಲಿ ಸಮ್ಮೇಳನ ನಡೆಯಲಿದ್ದು, ದೇಶ-ವಿದೇಶಗಳ ಸುಮಾರು 800 ವೈದ್ಯರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

‘ಎಲ್ಲೆಡೆ ಸುರಕ್ಷಿತ ಮಾತೃತ್ವ: ನಗರ–ಗ್ರಾಮೀಣ ಪ್ರದೇಶಗಳ ನಡುವಿನ ಪ್ರಸೂತಿ ಅರಿವಳಿಕೆ ಸೇವೆಗಳ ಅಂತರ ಕಡಿಮೆ ಮಾಡುವುದು’ ಸಮ್ಮೇಳನದ ಮುಖ್ಯ ಆಶಯವಾಗಿದೆ. ಸಿಮ್ಸ್ನ ಅರಿವಳಿಕೆ ಶಾಸ್ತ್ರ ವಿಭಾಗ ಹಾಗೂ ಇಂಡಿಯನ್ ಸೊಸೈಟಿ ಆಫ್ ಅನಸ್ತೀಷಿಯಾಲಜಿಸ್ಟ್ಸ್ (ಐಎಸ್ಎ) ಶಿವಮೊಗ್ಗ ಘಟಕದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಾದರಿ ನೋಂದಣಿ ವ್ಯವಸ್ಥೆಯ (ಎಸ್ಆರ್ಎಸ್) 2021–23ರ ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ಒಂದು ಲಕ್ಷ ಜೀವಂತ ಜನನಗಳಿಗೆ ಮಾತೃ ಮರಣ ಅನುಪಾತ 88 ಇದೆ. ಕರ್ನಾಟಕದಲ್ಲಿ 68 ಹಾಗೂ ಕೇರಳದಲ್ಲಿ 24ಇದೆ. ಈ ಪ್ರಮಾಣವನ್ನು 20ಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿಸುವುದು ಗುರಿಯಾಗಿದೆ ಎಂದರು.

ಗರ್ಭಧಾರಣೆ ಮತ್ತು ಹೆರಿಗೆಯ ಸಂದರ್ಭದಲ್ಲಿ ತೀವ್ರ ರಕ್ತಸ್ರಾವ, ಅಧಿಕ ರಕ್ತದೊತ್ತಡ, ಸೆಳವು, ಸೆಪ್ಸಿಸ್ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳಂತಹ ತುರ್ತು ಪರಿಸ್ಥಿತಿಗಳು ಎದುರಾಗಬಹುದು. ಇಂತಹ ಸಂದರ್ಭಗಳಲ್ಲಿ ಪ್ರಸೂತಿ, ಅರಿವಳಿಕೆ, ನವಜಾತ ಶಿಶು ಹಾಗೂ ತೀವ್ರ ನಿಗಾ ಚಿಕಿತ್ಸಾ ತಂಡಗಳ ಸಮನ್ವಯ ಮತ್ತು ಸಕಾಲಿಕ ವೈಜ್ಞಾನಿಕ ಚಿಕಿತ್ಸೆ ತಾಯಿ-ಮಗುವಿನ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿವರಿಸಿದರು.
ಕಾರ್ಯದರ್ಶಿ ಡಾ. ಬಿ.ವಿ. ಚಂಪಾ ಮಾತನಾಡಿ, ಸಮ್ಮೇಳನದ ಅಂಗವಾಗಿ ವಿವಿಧ ವೈದ್ಯಕೀಯ ವಿಷಯಗಳ ಕುರಿತು 4 ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಸಿಮ್ಸ್ನಲ್ಲಿ ಹೆರಿಗೆ ನೋವು ನಿವಾರಣೆ,

ನಂಜಪ್ಪ ನರ್ಸಿಂಗ್ ಕಾಲೇಜ್ ಆಫ್ ಸೈನ್ಸಸ್ನಲ್ಲಿ ತೀವ್ರ ನಿಗಾ ಚಿಕಿತ್ಸೆಯಲ್ಲಿ ಅಲ್ಟ್ರಾಸೌಂಡ್ ಬಳಕೆ, ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ತಾಯಿಯ ಆರೋಗ್ಯದಲ್ಲಿ ಹಠಾತ್ ಕುಸಿತ ಉಂಟಾದಾಗ ಜೀವ ರಕ್ಷಿಸುವ ವಿಧಾನಗಳು ಹಾಗೂ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ ಪ್ರಸೂತಿ ಅರಿವಳಿಕೆ ಸಂದರ್ಭದ ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತು ತರಬೇತಿ ನಡೆಯಲಿದೆ ಎಂದರು.

ಪ್ರಸೂತಿ ಅರಿವಳಿಕೆ ತಜ್ಞರಿಗಾಗಿ ಅ. 31 ಮತ್ತು ನ. 1ರಂದು ಡಾ. ಸುನೀಲ್ ಪಾಂಡ್ಯ ನೇತೃತ್ವದಲ್ಲಿ ಎರಡು ದಿನಗಳ ‘ಪ್ರಸೂತಿ ತೀವ್ರ ನಿಗಾ ಚಿಕಿತ್ಸೆ’ ಪ್ರಮಾಣಪತ್ರ ತರಬೇತಿ ನಡೆಯಲಿದೆ. ಇದರಲ್ಲಿ 50 ವೈದ್ಯರು ಭಾಗವಹಿಸಲಿದ್ದು, ಸಿಮ್ಯುಲೇಷನ್ ಮಾದರಿಗಳ ಮೂಲಕ ತುರ್ತು ಪರಿಸ್ಥಿತಿಗಳ ನಿರ್ವಹಣೆಯ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ ಎಂದರು.
ಆಸ್ಟ್ರೇಲಿಯಾ, ಬ್ರಿಟನ್, ಅಮೆರಿಕ, ಸಿಂಗಪುರ ಮತ್ತು ಮಲೇಷ್ಯೆ ಸೇರಿದಂತೆ ವಿವಿಧ ದೇಶಗಳ ಸುಮಾರು 10 ಅಂತರರಾಷ್ಟ್ರೀಯ ತಜ್ಞರು ಹಾಗೂ ದೇಶದ ನೂರಕ್ಕೂ ಹೆಚ್ಚು ತಜ್ಞರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ವಿಚಾರ ಸಂಕಿರಣಗಳು, ಸಂಶೋಧನಾ ಪ್ರಬಂಧಗಳ ಮಂಡನೆ, ಉಪನ್ಯಾಸಗಳು, ಚರ್ಚೆಗಳು ಹಾಗೂ ವಿಶೇಷ ತರಗತಿಗಳು ನಡೆಯಲಿವೆ ಎಂದು ಹೇಳಿದರು.
2006ರಲ್ಲಿ 25ರಿಂದ 30 ಸದಸ್ಯರೊಂದಿಗೆ ಆರಂಭವಾದ ಸಂಘದ ರಾಷ್ಟ್ರೀಯ ಸಮ್ಮೇಳನ ಆಯೋಜನೆಗೆ ಈ ಬಾರಿ ಸುಮಾರು ₹1.5 ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಎಸ್. ಅಶ್ವಿನಿ, ಡಾ. ಎಂ.ಸಿ. ಶಿವಕುಮಾರ್ ಹಾಗೂ ಡಾ. ಸುನೀಲ್ ಪಾಂಡ್ಯ ಇದ್ದರು.
ಸರ್ಜಿ ಆಸ್ಪತ್ರೆ: ದಾದಿಯರಿಗೆ ಉಚಿತ ತರಬೇತಿಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ಗಳಲ್ಲಿ ಪ್ರಸೂತಿ ಸೇವೆ ನೀಡುವ ದಾದಿಯರಿಗೆ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ. ಹೆರಿಗೆ ಸಂದರ್ಭದಲ್ಲಿ ಎದುರಾಗುವ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಸ್ಪಂದಿಸುವ ಕೌಶಲ ಬೆಳೆಸುವುದು ಕಾರ್ಯಾಗಾರಗಳ ಉದ್ದೇಶವಾಗಿದೆ ಎಂದು ಕಾರ್ಯದರ್ಶಿ ಡಾ. ಬಿ.ವಿ. ಚಂಪಾ ತಿಳಿಸಿದರು.
ಅರವಳಿಕೆಯಿಂದ ಬೆನ್ನುನೋವು; ಆಧಾರವಿಲ್ಲಸಿಸೇರಿಯನ್ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ಬೆನ್ನುಮೂಳೆಯ ಮೂಲಕ ನೀಡುವ ಅರವಳಿಕೆಯಿಂದ ಮುಂದೆ ಬೆನ್ನುನೋವು ಕಾಣಿಸಿಕೊಳ್ಳುತ್ತದೆ ಎಂಬ ನಂಬಿಕೆಗೆ ವೈಜ್ಞಾನಿಕ ಆಧಾರವಿಲ್ಲ. ದೈಹಿಕ ಚಟುವಟಿಕೆಯ ಕೊರತೆ, ಸ್ನಾಯುಗಳ ದೌರ್ಬಲ್ಯ ಹಾಗೂ ವಯೋಸಹಜ ಬದಲಾವಣೆಗಳು ಸೇರಿದಂತೆ ಹಲವು ಕಾರಣಗಳಿಂದ ಬೆನ್ನುನೋವು ಕಾಣಿಸಿಕೊಳ್ಳಬಹುದು ಎಂದು ಡಾ. ಜಿ.ಎಲ್. ರವೀಂದ್ರ ಅಭಿಪ್ರಾಯಪಟ್ಟರು.