ಶಿವಮೊಗ್ಗ ಅ, 29: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಸಂಬಂಧಿತ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ “ಬರ ನಿರ್ವಹಣೆಗಾಗಿ ನಾವೀನ್ಯತಾ ಕೃಷಿ” ಎಂಬ ಧೈಯವಾಕ್ಯದೊಂದಿಗೆ ‘ಕೃಷಿ ಮತ್ತು ತೋಟಗಾರಿಕೆ ಮೇಳ-2026’ ಅನ್ನು ಆಯೋಜಿಸಲಾಗಿದೆ. ಈ ಮೇಳವು ಶಿವಮೊಗ್ಗದ ನವಿಲೆ ಆವರಣದಲ್ಲಿರುವ ಕೃಷಿ ಮಹಾವಿದ್ಯಾಲಯದಲ್ಲಿ ದಿನಾಂಕ 30-10-2026 ರಿಂದ 02-11-2026 ರವರೆಗೆ ಒಟ್ಟು 4 ದಿನಗಳ ಕಾಲ ನಡೆಯಲಿದೆ.

ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ:
ದಿನಾಂಕ 30-10-2026 ರ ಶುಕ್ರವಾರದಂದು ಕೃಷಿ ಸಚಿವರಾದ ಪಿ. ಎಂ. ನರೇಂದ್ರ ಸ್ವಾಮಿ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆಯಲ್ಲಿ ವಿನೂತನ ಪ್ರಯೋಗಗಳನ್ನು ನಡೆಸಿ ಯಶಸ್ವಿಯಾದ ವಿಶ್ವವಿದ್ಯಾಲಯದ ವ್ಯಾಪ್ತಿಯ 6 ಜಿಲ್ಲೆಗಳ ಒಟ್ಟು 12 ಮಂದಿ ಪ್ರಗತಿಪರ ರೈತ ಹಾಗೂ ರೈತ ಮಹಿಳೆಯರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ ವಹಿಸಲಿದ್ದಾರೆ.
ಎರಡನೇ ದಿನವಾದ 31-10-2026ರ ಶನಿವಾರದಂದು ಶಾಲಾ ಶಿಕ್ಷಣ, ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿವಿಧ ಪುಸ್ತಕಗಳು ಮತ್ತು ತಾಂತ್ರಿಕ ಕೈಪಿಡಿಗಳನ್ನು ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಡಾ. ಎಮ್. ವಿ. ಧನಂಜಯ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮೇಳದ ಅಧ್ಯಕ್ಷರು ಹಾಗೂ ವಿಸ್ತರಣಾ ನಿರ್ದೇಶಕರಾದ ಡಾ. ರಾಘವೇಂದ್ರ ಕೆ. ಮೇಸ್ತ ಅವರು ಧನ್ಯವಾದ ಸಮರ್ಪಿಸಲಿದ್ದಾರೆ.

ಈ ಸಮಾರಂಭದಲ್ಲಿ ಜನಪ್ರತಿನಿಧಿಗಳು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ವಿಶ್ವವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯರು, ಡೀನ್ಗಳು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.

ರೈತ ಬಾಂಧವರು, ಸಾರ್ವಜನಿಕರು ಹಾಗೂ ಕೃಷಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಮೇಳದ ಪ್ರಯೋಜನ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.