ಸಾಗರ : ಗಣೇಶೋತ್ಸವ ಹಿನ್ನೆಲೆಯಲ್ಲಿ ರಾತ್ರಿ ೧೦ರ ನಂತರ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು. ಇಲಾಖೆ ಸೂಚನೆ ನಂತರವೂ ಒಂದೊಮ್ಮೆ ಅಂಗಡಿ ಮುಂಗಟ್ಟುಗಳ ಎದುರು ಗಲಾಟೆ ನಡೆದರೆ ಅಂತಹ ಅಂಗಡಿ ಮಾಲೀಕನ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ತಿಳಿಸಿದರು.
ಪತ್ರಕರ್ತರ ಜೊತೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ಸಹ ಹೆಚ್ಚು ಜವಾಬ್ದಾರಿಯಿಂದ ಗೌರಿಗಣೇಶ ಹಬ್ಬದ ಸಂದರ್ಭದಲ್ಲಿ ವರ್ತಿಸಬೇಕು. ಸಂದೇಶ ಕಳಿಸಬೇಕಾದರೆ, ಬೇರೆಯವರಿಂದ ಬಂದ ಸಂದೇಶ ಕಳಿಸುವಾಗ ಸಹ ಎಚ್ಚರಿಕೆಯಿಂದ ಇರಿ.
ತೇಜೋವಧೆ, ಧರ್ಮಾಧಾರಿತ ಪ್ರಚೋದನೆ, ಇನ್ನೊಂದು ಧರ್ಮಕ್ಕೆ ಕೆಣಕುವಂತೆ ಇದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು..
ಹೋಟೆಲ್ಗಳಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಹೆಚ್ಚು ಹೊತ್ತು ಕುಳಿತುಕೊಂಡು ಗೇಮ್ ಆಡಲು ಬಿಡಬಾರದು. ಇದರಿಂದ ಮಕ್ಕಳ ಭವಿಷ್ಯ ಹಾಳಾಗುತ್ತದೆ. ಹೋಟೆಲ್ಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಗೇಮ್ ಇನ್ನಿತರೆ ಆಡಲು ಅವಕಾಶ ನೀಡಿದರೆ ಅಂತಹ ಹೋಟೆಲ್ ಪರವಾನಿಗೆ ರದ್ದುಪಡಿಸಲಾಗುತ್ತದೆ. ಸಿಗರೇಟ್, ಬೀಡಿಯನ್ನು ಮಕ್ಕಳಿಗೆ ಕೊಟ್ಟರೆ ಕಠಿಣ ಕಾನೂನುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ದ್ವಿಚಕ್ರ ವಾಹನ ಇರಿಸಿಕೊಂಡವರು ಲೈಸೆನ್ಸ್ ಕಡ್ಡಾಯವಾಗಿ ಇರಿಸಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಲೈಸೆನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ ಕಾನೂನುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದ ಅವರು,
ಗಣೇಶ ಮೂರ್ತಿ ಪ್ರತಿಷ್ಟಾಪಿಸುವ ಪೆಂಡಾಲ್ ಬಳಿ ರಾತ್ರಿ ೧೦ ಗಂಟೆವರೆಗೆ ಮಾತ್ರ ಧ್ವನಿವರ್ಧಕ ಅಳವಡಿಕೆಗೆ ಅವಕಾಶ ಇರುತ್ತದೆ. ಒಂದೊಮ್ಮೆ ಅವಘಡಗಳು ನಡೆದರೆ ಗಣೇಶ ಪ್ರತಿಷ್ಟಾಪನೆ ಮಾಡಿದವರು ವಿರುದ್ದ ಕ್ರಮ ತೆಗೆದುಕೊಳ್ಳುತ್ತೇವೆ. ಪಟಾಕಿ ಸಿಡಿಸುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.