ಸಾಗರ, ಆ.೨೯- ವಿಪರೀತ ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಅಡಿಕೆಗೆ ತೀವ್ರ ಕೊಳೆರೋಗ ಬಂದಿದ್ದು, ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು. ಹೆಕ್ಟೇರ್ಗೆ ೪೯ ಸಾವಿರ ರೂ. ಬೆಳೆ ನಷ್ಟ ಪರಿಹಾರ ಕೊಡಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆಗ್ರಹಿಸಿದರು.
ಇಲ್ಲಿನ ಉಪ ವಿಭಾಗಾಧಿಕಾರಿಗಳ ಕಚೇರಿ ಎದುರು ಗುರುವಾರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಕೊಳೆ ರೋಗ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಲು ಆಯೋಜಿಸಿದ್ದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಎರಡು ಸೇರಿ ಬೆಳೆಗಾರರಿಗೆ ಪರಿಹಾರ ನೀಡಲು ಅವಕಾಶವಿದೆ. ಹೆಕ್ಟೇರ್ಗೆ ರಾಜ್ಯ ಸರ್ಕಾರ ೨೪ ಸಾವಿರ ಮತ್ತು ಕೇಂದ್ರ ಸರ್ಕಾರ ೨೫ ಸಾವಿರ ರೂ. ಒಟ್ಟೂ ೪೯ ಸಾವಿರ ಕೊಡಬೇಕು. ಈ ಹಿಂದಿನ ದೇಶವನ್ನೇ ಜಾರಿಗೊಳಿಸಬೇಕು ಎಂದರು.
೨೦೧೩ ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಗೋಡು ತಿಮ್ಮಪ್ಪನವರ ಶಿಫಾರಸ್ಸಿನಂತೆ ಬೆಳೆಗಾರರಿಗೆ ಪರಿಹಾರ ನೀಡಿದ್ದರು. ಹೆಕ್ಟೇರ್ಗೆ ೨೪,೯೦೦ ರೂ. ಕೊಡಲು ಅವಕಾಶವಿದೆ. ಸರ್ಕಾರ ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಯಿಂದ ಜಂಟಿ ಸರ್ವೆ ನಡೆಸಬೇಕು. ಶೇಕಡಾ ಎಷ್ಟು ಹಾನಿಯಾಗಿದೆ ಎಂಬುದನ್ನು ಪರಿಶೀಲಿಸಬೇಕು. ಶೇ. ೩೩ ಕ್ಕಿಂತ ಹೆಚ್ಚು ಬೆಳೆ ಹಾನಿಯಾದರೆ ಪರಿಹಾರಕ್ಕೆ ಆದೇಶ ಮಾಡಬಹುದು. ಎಲ್ಲ ರೈತರೂ ಅರ್ಜಿ ಸಲ್ಲಿಸಬೇಕು ಎಂದು ವಿನಂತಿಸಿದರು.
ಅಡಿಕೆ ತೋಟದಲ್ಲಿ ಅಡಿಕೆ ಜತೆ ಕಾಳು ಮೆಣಸು, ತೆಂಗು ಇತರೆ ಉಪ ಬೆಳೆಗಳೂ ಹಾನಿಗೊಳಗಾಗಿವೆ. ಇವುಗಳಿಗೂ ಪರಿಹಾರ ನೀಡಬೇಕು. ಒಂದು ವಾರದಲ್ಲಿ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು. ಚುನಾಯಿತ ಪ್ರತಿನಿಧಿಗಳು ಹಾನಿ ಪ್ರದೇಶಕ್ಕೆ ಹೋಗಿ ಫೋಟೊ ತೆಗೆಸಿಕೊಂಡು ಪ್ರಚಾರ ಪಡೆದರೆ ಸಾಲದು, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಬೆಳೆಗಾರರಿಗೆ ಪರಿಹಾರ ಕೊಡಿಸಬೇಕು. ಶಾಸಕರು ಬೆಳೆಗಾರರ ಪರ ದನಿ ಎತ್ತಬೇಕು. ಬೆಳೆಗಾರಿಗೆ ಪರಿಹಾರ ಸಿಗದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು ಮಾತನಾಡಿ, ಕಳೆದ ೧೫೦ ವರ್ಷಗಳಿಂದಲೂ ಸಾಂಪ್ರದಾಯಿಕ ಬೆಳೆಗಾರರು ಅಡಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಇವರ ಬದುಕಿನ ಆರ್ಥಿಕ ವಹಿವಾಟಿನ ಮೂಲವೇ ಅಡಿಕೆ ಬೆಳೆ. ಬೆಳೆ ನಷ್ಟವಾದರೆ ಬದುಕು
ಆತಂಕಕ್ಕೊಳಗಾಗುತ್ತದೆ. ಸರ್ಕಾರ ಬೆಳೆಗಾರರ ಪರಿಸ್ಥಿತಿಯನ್ನು ಗಮನಿಸಿ ಕೂಡಲೇ ಪರಿಹಾರ ನೀಡಬೇಕು. ಅಡಿಕೆ ಮತ್ತು ಉಪ ಬೆಳೆಗಳಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ರೂ. ತೆರಿಗೆ ಆದಾಯವಿದೆ. ಬೆಳೆಗಾರರು ಕಾಡುಪ್ರಾಣಿಗಳ ಹಾವಳಿಯಿಂದಲೂ ತೊಂದರೆಗೊಳಗಾಗಿದ್ದಾರೆ. ಸರ್ಕಾರ ಪರಿಹಾರ ನೀಡದಿದ್ದರೆ ಹೋರಾಟ ಅನಿವಾರ್ಯ ಎಂದರು.
ಸೊರಬ ತಾಲ್ಲೂಕಿನ ಬೆಳೆಗಾರರಾದ ಪ್ರಕಾಶ ತಲಕಾಲಕೊಪ್ಪ ಮಾತನಾಡಿ, ಸಾಮಾನ್ಯ ಕೊಳೆರೋಗ ಬಂದಾಗ ಸೊರಬ ತಾಲ್ಲೂಕಿನಲ್ಲಿ ಬೆಳೆಗಾರರು ಔಷಧಿ ಹೊಡೆಸುವುದಿಲ್ಲ. ಆದರೆ ಈ ಬಾರಿ ಕೊಳೆ ರೋಗ ಒಂದು ತೋಟವನ್ನೂ ಬಿಟ್ಟಿಲ್ಲ. ಶೇ. ೧೦೦ ರಷ್ಟು ಬೆಳೆ ನಷ್ಟದ ಆತಂಕ ಎದುರಾಗಿದೆ. ಈಗಾಗಲೇ ಮೂರು ಬಾರಿ ಔಷಧಿ ಸಿಂಪಡಣೆ ಮಾಡಲಾಗಿದೆ. ಆದರೂ ಕೊಳೆ ನಿಂತಿಲ್ಲ. ಬೆಳೆಗಾರರಿಗೆ ಪರಿಹಾರ ನೀಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅವಕಾಶವಿದೆ. ಸರ್ಕಾರ, ಅಧಿಕಾರಿಗಳು ಮನಸ್ಸು ಮಾಡಬೇಕು. ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್ ಮಾತನಾಡಿ, ಅಡಿಕೆ ತೋಟದಲ್ಲಿ ಈಗಾಗಲೇ ಶೇ. ೫೦ ಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಮರ ಉಳಿಸಿಕೊಳ್ಳುವುದೂ ಕಷ್ಟ. ತೋಟದಲ್ಲಿ ಕೊಳೆ ಅಡಿಕೆ ಮೇಲೆ ಕಾಲಿಟ್ಟು ಹೋಗುವ ಸ್ಥಿತಿ ಎದುರಾಗಿದೆ. ಅಡಿಕೆ ಕಾಯಿಯನ್ನು ಮಂಗಗಳು ಚೀಪಿ ಬಿಸಾಡುತ್ತಿವೆ. ಅಡಿಕೆ ಬೆಳೆಗಾರರು ಶ್ರೀಮಂತರು ಎನ್ನುವ ಮನೋಭಾವವಿದೆ. ಆದರೆ ವಾಸ್ತವವೇ ಬೇರೆ ಇದೆ. ೨೦೧೩ ರಲ್ಲಿ ವ್ಯಾಪಕ ಕೊಳೆ ಬಂದು ಅಂದಿನ ಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪನವರು ಬೆಳೆಗಾರರಿಗೆ ಪರಿಹಾರ ಕೊಡಿಸಿದ್ದರು. ಈಗಿನ ಶಾಸಕರು ಪರಿಹಾರ ಕೊಡಲು ಪ್ರಯತ್ನಿಸಬೇಕು ಎಂದರು.
ಪ್ರಮುಖರಾದ ಯು.ಎಚ್.ರಾಮ್ಮಪ್ಪ, ದಿನೇಶ್ ಬರದವಳ್ಳಿ ಮಾತನಾಡಿ, ಉಪ ವಿಭಾಗಾಧಿಕಾರಿಗಳು ತಕ್ಷಣ ಬೆಳೆಗಾರರ ಮನವಿ ಪರಿಶೀಲಿಸಿ ಸರ್ಕಾರದ ಗಮನಕ್ಕೆ ತರಬೇಕು. ಸರ್ಕಾರ ಸುಮ್ಮನಿದ್ದರೆ ಆಡಳಿತದ ವಿರುದ್ಧ ಬೆಳೆಗಾರರು ತೀವ್ರ ಪ್ರತಿಭಟನೆಗೆ ಸಜ್ಜಾಗಬೇಕು. ಕೊಳೆರೋಗದ ಸ್ಥಿತಿ ನೋಡಿದರೆ ಅಡಿಕೆ ಮರ ಉಳಿಯುವುದೂ ಕಷ್ಟವಾಗಿದೆ. ಬ್ಯಾಕೋಡಿನಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೃತಿಗೆಡದೇ ಹೋರಾಟ ಮಾಡೋಣ ಎಂದರು.
ಅಡಿಕೆ ಬೆಳೆಗಾರರ ಸಂಘದ ವತಿಯಿಂದ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೆಳೆಗಾರ ಪ್ರಮುಖರಾದ ಕೆ.ಸಿ.ದೇವಪ್ಪ, ಆರ್.ಎಸ್.ಗಿರಿ, ಕಲ್ಸೆ ಕೆ.ಆರ್.ಶ್ರೀಧರ ಭಟ್, ಪ್ರಸನ್ನ ಕೆರೆಕೈ, ಕೆ.ಎನ್.ಶ್ರೀಧರ್, ಕೆ.ಎಸ್.ಗೌತಮ್, ಅ.ಪು.ನಾರಾಯಣಪ್ಪ, ಹು.ಬಾ.ಅಶೋಕ್, ಈಳಿ ಶ್ರೀಧರ್, ವೆಂಕಟಗಿರಿ ಕುಗ್ವೆ, ವೆಂಕಟಗಿರಿ ಮತ್ತಿಕೊಪ್ಪ, ರಾಜೇಂದ್ರ ಖಂಡಿಕ, ರವಿಕುಮಾರ್, ಜಯಪ್ರಕಾಶ್ ಮಾವಿನಕುಳಿ, ವೆಂಕಟೇಶ್ ಬೆಳೆಯೂರು ಮತ್ತಿತರರು ಹಾಜರಿದ್ದರು.