ಶಿವಮೊಗ್ಗ: ಮಲೆನಾಡು ರೈತ ಹೋರಾಟ ಸಮಿತಿ ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರಿಗೆ ಬೆಂಬಲ ನೀಡಲಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ತೀ.ನಾ. ಶ್ರೀನಿವಾಸ್ ಹೇಳಿದರು.
ಅವರು ಇಂದು ಕೆ.ಎಸ್. ಈಶ್ವರಪ್ಪನವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಲೆನಾಡು ರೈತರ ಸಮಸ್ಯೆಯನ್ನು ಯಾವ ಸರ್ಕಾರಗಳೂ ಬಗೆಹರಿಸಲಿಲ್ಲ. ಯಡಿಯೂರಪ್ಪ, ಬಿ.ವೈ. ರಾಘವೇಂದ್ರ ಸಂಸದರಾಗಿದ್ದರು. ಸಂಸತ್ ನಲ್ಲಿ ಧ್ವನಿಯೂ ಎತ್ತಲಿಲ್ಲ. ಇತ್ತ ಕಾಂಗ್ರೆಸ್ ಸರ್ಕಾರ ಕೂಡ ಶರಾವತಿ ಸಂತ್ರಸ್ತರ ಮತ್ತು ಬಗರ್ಹುಕುಂ ಸಾಗುವಳಿದಾರರ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹಾಗಾಗಿ ನಾವು ಈ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ.ಎಸ್. ಈಶ್ವರಪ್ಪ ಅವರನ್ನು ಬೆಂಬಲಿಸುತ್ತಿದ್ದೇವೆ. ಅವರು ಗೆದ್ದರೆ ಖಂಡಿತಾ ಮಲೆನಾಡು ಭಾಗದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದರು.
ಮಾಜಿ ಮುಖ್ಯಮಂತ್ರಿಗಳ ಮಕ್ಕಳೇ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ? ಇದು ಕುಟುಂಬ ರಾಜಕಾರಣವಲ್ಲವೇ? ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಮಲೆನಾಡಿನ ರೈತರ ನೆರವಿಗೆ ಬಾರದೇ ಇರಲು ಕಾರಣವೇನು? ಹಸಿರು ಟವೆಲ್ ಹಾಕಿಕೊಂಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದವರು ಯಾಕೆ ಈ ಸಮಸ್ಯೆಯನ್ನು ಗಂಭೀರವಾಗಿ ಕಾಣಲಿಲ್ಲ ಎಂದು ಪ್ರಶ್ನಿಸಿದರು.
ಇದರ ಜೊತೆಗೆ ಹಿಂದುಳಿದ ವರ್ಗಗಳ ಪರ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಏನನ್ನೂ ಮಾಡಲಿಲ್ಲ. ಕೆ.ಎಸ್. ಈಶ್ವರಪ್ಪನವರು ಹಿಂದುಳಿದ ವರ್ಗದ ನಾಯಕರಾಗಿದ್ದಾರೆ. ಖಂಡಿತಾ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ನಮ್ಮದು. ಹಾಗಾಗಿ ಅವರು ಈ ಬಾರಿ ಗೆಲ್ಲಬೇಕು. ಮತ್ತು ಗೆದ್ದೇ ಗೆಲ್ಲುತ್ತಾರೆ ಎಂದರು.
ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಮಾತನಾಡಿ, ತೀ. ನಾ. ಶ್ರೀನಿವಾಸ್ ಅವರು ಹೋರಾಟಗಾರರು. ನಿಷ್ಠೂರವಾದಿ. ಮಲೆನಾಡು ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ಯಾವುದೇ ಸರ್ಕಾರವಿರಲಿ. ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇದರ ಜೊತೆಗೆ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಬೇಕು ಎಂಬ ಅವರ ನಿಲುವು ಸರಿಯಾಗಿಯೇ ಇದೆ. ಹಿಂದುಳಿದ ವರ್ಗಗಳ ಸಂಘಟನೆಗಾಗಿಯೇ ನಾನು ಈ ಹಿಂದೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದೆ. ಆದರೆ, ಬಿ.ಎಸ್. ಯಡಿಯೂರಪ್ಪನವರ ದುರಾಲೋಚನೆಯಿಂದ ಅದು ನಿಂತಿತು. ಯಡಿಯೂರಪ್ಪನವರನ್ನು ಕಂಡರೆ ಕೇಂದ್ರ ಬಿಜೆಪಿಯವರಿಗೆ ಅದೇನು ಮೋಹವೋ ನನಗೆ ಗೊತ್ತಿಲ್ಲ ಎಂದರು.
ನಾನು ಗೆದ್ದರೆ ಖಂಡಿತಾ ಮಲೆನಾಡು ಭಾಗದ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಂದಾಯ ಸಚಿವನಾಗಿದ್ದಾಗ 94ಸಿ ಕಾಯ್ದೆಯನ್ನು ವಿರೋಧಗಳ ನಡುವೆಯೂ ಜಾರಿಗೆ ತಂದಿದ್ದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಇ. ಕಾಂತೇಶ್ ಸೇರಿದಂತೆ ಹಲವರು ಇದ್ದರು.