ರಿಪ್ಪನ್ಪೇಟೆ: ಕಾಂಗ್ರೆಸ್ ಕೇಂದ್ರದಲ್ಲಿ ಅಧಿ ಕಾರಕ್ಕೆ ಬಂದರೆ ಮಹಿಳೆಯರಿಗೆ ಒಂದು ಲಕ್ಷ ರೂ. ಗ್ಯಾರಂಟಿ ನೀಡುವ ಭರವಸೆ ನೀಡಿದ್ದು ಮತ ಯಾಚಿಸಲು ಬರುವ ಪಕ್ಷದವರಲ್ಲಿ ಮುಂಗಡವಾಗಿ 10 ಸಾವಿರ ರೂ. ಹಣವನ್ನು ಅಡ್ವಾನ್ಸ್ ಕೊಟ್ಟು ಉಳಿದ 90 ಸಾವಿರ ಹಣವನ್ನು ನಂತರ ಕೊಡಿ ಎಂದು ಕೇಳಿ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೇಳಿದರು.
ಸಮೀಪದ ಅಮೃತ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಮತ ಯಾಚಿಸಿ ಮಾತನಾಡಿದ ಅವರು, ದೇಶದ ವರ್ಷದ ಬಜೆಟ್ 48 ಲಕ್ಷ ಕೋಟಿ ರೂ. ಆದರೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದ ಎಲ್ಲ ಮಹಿಳೆಯರಿಗೆ ಲಕ್ಷ ರೂ. ಗ್ಯಾರಂಟಿ ಎಂದು ಘೋಷಿಸಲಾಗಿದೆ. 68 ಕೋಟಿ ಮಹಿಳೆಯರು ..
ಇರುವ ದೇಶದಲ್ಲಿ ತಲಾ ಒಂದು ಲಕ್ಷ ರೂ. ಗ್ಯಾರಂಟಿ ಕೊಡುವ ಯೋಜನೆಗೆ 68 ಲಕ್ಷ ಕೋಟಿ ರೂ. ಕೊಡಬೇಕಾಗುತ್ತದೆ. ಹಾಗಾದರೆ ಆ ಹಣ ಎಲ್ಲಿಂದ ಕೊಡಲು ಸಾಧ್ಯ ಎಂದು ಕೇಳಿದಾಗ ಎಚ್ಚೆತ್ತ ಕಾಂಗ್ರೆಸ್ ನವರು ಕುಟುಂಬದ ಓರ್ವ ಮಹಿಳೆಗೆ ಎಂದು ಹೇಳುತ್ತಿದ್ದಾರೆ. ಮುಗ್ಧ ಮನಸ್ಸಿನ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರದಲ್ಲಿ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಹರಿಕೃಷ್ಣ,ತಾಲೂಕು ಬಿಜೆಪಿ ಆಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ, ಬಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ ಎನ್. ಸತೀಶ್, ಶಿವಮೊಗ್ಗ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಪಕ್ಷದ ಮುಖಂಡರಾದ ಆರ್.ಟಿ. ಗೋಪಾಲ, ಮಾಜಿ ಆಧ್ಯಕ್ಷ ಗಣಪತಿ ಬೆಳಗೋಡು, ಜಿಪಂ ಮಾಜಿ ಸದಸ್ಯರಾದ ಬಿ.ಎಸ್. ಪುರುಷೋತ್ತಮ್ ರಾವ್, ಸುರೇಶ ಸ್ವಾಮಿರಾವ್ ಇದ್ದರು.