ಶಿವಮೊಗ್ಗ, ಏ.17:
ಒಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರಿಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಲೋಕಸಭಾ ಚುನಾವಣೆಯ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಹಾಗೂ ಮತ್ತೊಂದೆಡೆ ಸಂಸದ ಬಿ. ವೈ. ರಾಘವೇಂದ್ರ ಅವರಿಗೆ ಸಚಿವ ಮಧುಬಂಗಾರಪ್ಪ ಅವರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡದ್ದು, ಹೇಗಿತ್ತು ಗೊತ್ತೇ?
ಇಂದು ಬೆಳಗ್ಗೆ ಪ್ರಥಮ ಸುದ್ದಿಗೋಷ್ಟಿಯಲ್ಲಿ ಉಪ ಉಪಮುಖ್ಯಮಂತ್ರಿ ಈಶ್ವರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಅವನೇನು ಬಿಜೆಪಿ ನಾಯಕನಾ? ಹಿರಿಯರ ಬಗ್ಗೆ ಹೇಗೆ ಮಾತನಾಡಬೇಕು ಗೊತ್ತಿಲ್ಲವೇ? ಅವನು ಯಾವಾಗ ಪಕ್ಷಕ್ಕೆ ಬಂದನು? ಪಕ್ಷವನ್ನು ಹೇಗೆ ಸಂಘಟಿಸಿದನು? ಬಿಜೆಪಿಯನ್ನು ಹೇಗೆ ಕಟ್ಟಿದನು ಎಂದು ಪ್ರಶ್ನಿಸಿದರು.
ಅಪ್ಪ ಮಕ್ಕಳು ಇಬ್ಬರು ಆರು ತಿಂಗಳು ಡೆಲ್ಲಿಯಲ್ಲಿ ಕುಳಿತುಕೊಂಡು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡು ಬಂದಿದ್ದಾರೆ ಎಂದರು.
ಭಾರತೀಯ ಜನತಾ ಪಕ್ಷವನ್ನು ಸ್ವಚ್ಛಗೊಳಿಸಬೇಕು. ಕುಟುಂಬ ಮುಕ್ತ ಮಾಡಬೇಕು. ಅಪ್ಪ ಮಕ್ಕಳ ಹಿಡಿತದಿಂದ ಪಕ್ಷಕ್ಕೆ ಮುಕ್ತಿ ದೊರಕಬೇಕು ಎಂಬ ಕಾರಣದಿಂದ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದರು.
ನನಗೆ ಅಪೂರ್ವ ಬೆಂಬಲ ಅದರಲ್ಲೂ ಬಿಜೆಪಿಯಿಂದ ಶೇಕಡ 70ರಷ್ಟು ಬೆಂಬಲ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಶೇಕಡ 50ರಷ್ಟು ಬೆಂಬಲ ದೊರಕಿರುವುದರಿಂದ ಚುನಾವಣೆಯ ಇಂದಿನ ವಾತಾವರಣದಂತೆ ನನಗೆ ಈ ಪಲಿತಾಂಶದಲ್ಲಿ ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಜಯಗಳಿಸುತ್ತೇನೆ ಎಂದರು.
ಮತ್ತೊಂದೆಡೆ ಎರಡನೇ ಪತ್ರಿಕಾಗೋಷ್ಠಿಯಲ್ಲಿ ಸಚಿವ ಮಧು ಬಂಗಾರಪ್ಪ ಅವರು ರಾಘವೇಂದ್ರ ಅವರಿಗೆ ನೀನಿನ್ನು ರಾಜಕಾರಣ ಗೊತ್ತಿಲ್ಲದ ಬಚ್ಚನಾಗಿದ್ದೆ. ನಾನು ನಿಮ್ಮಪ್ಪನಿಗೆ ವೋಟು ಕೇಳಿದ್ದು ನೆನಪಿದೆಯೇ? ನನ್ನ ಅಪ್ಪ ಬಂಗಾರಪ್ಪನ ಬಗ್ಗೆ ನಿನಗೆ ಮಾತನಾಡುವ ಯಾವ ನೈತಿಕ ಹಕ್ಕು ಇದೆ ಎಂದು ಪ್ರಶ್ನಿಸಿದರು.
ನೀ ದೂರದಲ್ಲಿ ಎಲ್ಲೊ ಇದ್ದೆ. ನಿಮ್ಮಪ್ಪನ ವಿನಂತಿಯಂತೆ ನನ್ನಪ್ಪನ ಆದೇಶದಂತೆ ನಾನು ಶಿಕಾರಿಪುರದಲ್ಲಿ ನಿಮ್ಮಪ್ಪನಿಗೆ ಓಟು ಕೇಳಿದ್ದೆ ಗೊತ್ತಾ ಎಂದು ಪ್ರಶ್ನಿಸಿದರು.
ನಿನಗೆ ಮೊದಲು ಏನು ಗೊತ್ತಿತ್ತು. ನನ್ನ ತಂದೆ ಶಕ್ತಿಯ ಬಗ್ಗೆ ಅರಿವಿರುವ ನೀನು ಅವರನ್ನು ಬಿಜೆಪಿಯಿಂದ ಗೆದ್ದರು ಎಂದು ಹೇಳಿದ್ದೀಯಾ. ನನ್ನ ಅಪ್ಪನ ಶಕ್ತಿ ಇಡೀ ರಾಷ್ಟ್ರಕ್ಕೆ ಗೊತ್ತು. ನಿನ್ನದನ್ನು ನೀನು ನೋಡಿಕೋ. ಸುಖಾ ಸುಮ್ಮನೆ ಮಾತನಾಡಬೇಡ ಎಂದರು.
ಬಂಗಾರಪ್ಪ ಬಿಜೆಪಿಗೆ ರಾಜ್ಯದಲ್ಲಿ ಒಂದು ದೊಡ್ಡ ಶಕ್ತಿ ತಂದುಕೊಟ್ಟರು ಎಂಬುದು ನೆನಪಿರಲಿ. ಸುಖ ಸುಮ್ಮನೆ ಗೊಂದಲ ಹುಟ್ಟಿಸುವ ಹೇಳಿಕೆ ನೀಡಬೇಡ. ನಿಮ್ಮ ತಟ್ಟೆಯಲ್ಲಿರುವ ಕೊಳೆತ ಹೆಗ್ಗಣವನ್ನು ಮೊದಲು ತೆಗೆದು ಹಾಕು. ನಿನ್ನ ಪಕ್ಷದಲ್ಲೇ ಇರುವ ಈಶ್ವರಪ್ಪನ ಪ್ರಶ್ನೆಗೆ ಉತ್ತರಿಸು ಎಂದರು.
ಬಂಗಾರಪ್ಪನ ಮಗಳು, ನನ್ನ ಅಕ್ಕ ಈ ಬಾರಿ ಚುನಾವಣೆಯಲ್ಲಿ ನಿನಗೆ ಪಾಠ ಕಲಿಸುತ್ತಾಳೆ. ಮತದಾರರು ಸಜ್ಜಾಗಿದ್ದಾರೆ. ನೀನು ನಿನ್ನ ಎಚ್ಚರಾವಸ್ಥೆಯಲ್ಲಿ ಇದ್ದರೆ ಒಳ್ಳೆಯದು ಎಂದು ಖಾರವಾಗಿ ಹೇಳಿದರು.
ಒಂದೆಡೆ ಈಶ್ವರಪ್ಪ ಮತ್ತೊಂದೆಡೆ ಮಧು ಬಂಗಾರಪ್ಪ ಅವರು ವಿಜೇಂದ್ರ ಹಾಗೂ ರಾಘವೇಂದ್ರ ಅವರಿಗೆ ಪ್ರತ್ಯೇಕವಾಗಿ ಜಾಡಿಸಿದ್ದು ವಿಶೇಷವಾಗಿತ್ತು.