ಶಿವಮೊಗ್ಗ: ದೇಶದ ಅಭಿವೃದ್ಧಿಗೆ ಸಮರ್ಥ ವ್ಯಕ್ತಿಯನ್ನು ಆಯ್ಕೆ ಮಾಡಲು ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು. ಮತದಾನವು ಪ್ರತಿಯೊಬ್ಬರ ಹಕ್ಕು ಎಂದು ಮಹಾನಗರ ಪಾಲಿಕೆ ಅಧಿಕಾರಿ ಟಿ.ಆರ್.ಅನುಪಮಾ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಸದಸ್ಯರಿಗೆ ಹಾಗೂ ಬಡಾವಣೆ ನಿವಾಸಿಗಳಿಗೆ ಹಮ್ಮಿಕೊಳ್ಳಲಾದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರ್ಹ ಮತದಾರರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು. ಲೋಕಸಭೆ ಚುನಾವಣೆ ಮತದಾನ ದಿನದಂದು ಯಾವುದೇ ನೆಪ ಹೇಳಿ ಮತ ಚಲಾವಣೆಯಿಂದ ತಪ್ಪಿಸಿಕೊಳ್ಳಬಾರದು. ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಶೇ. 100 ಮತದಾನ ಆಗಲು ಸಹಕರಿಸಬೇಕು ಎಂದು ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೃಢ ವಿಶ್ವಾಸವಿಟ್ಟಿರುವ ಭಾರತ ದೇಶದ ಪ್ರಜೆಗಳಾದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ ನ್ಯಾಯಸಮ್ಮತ ಶಾಂತಿಯುತ ಚುನಾವಣೆಗಳನ್ನು ಎತ್ತಿ ಹಿಡಿಯಬೇಕು. ಚುನಾವಣೆಯಲ್ಲಿ ನಿರ್ಭಿತರಾಗಿ ಧರ್ಮ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೆಪಣೆಗಳಿಗೆ ಪ್ರಭಾವಿತರಾಗದೇ ಮತ ಚಲಾಯಿಸಬೇಕು ಎಂದರು.
ಗ್ರಾಮೀಣ ಪ್ರದೇಶಗಳಿಗಿಂತ ಪಟ್ಟಣ ಪ್ರದೇಶಗಳಲ್ಲಿ ಮತದಾನ ಪ್ರಮಾಣ ಕಡಿಮೆ ಇದ್ದು, ಈ ಬಾರಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಅತಿ ಹೆಚ್ಚಿನ ಪ್ರಮಾಣ ಮತದಾನ ಆಗುವಂತೆ ನಾವೆಲ್ಲರೂ ಜವಾಬ್ದಾರಿ ನಿರ್ವಹಿಸಬೇಕು ಎಂದು ತಿಳಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಚುನಾವಣೆಗಾಗಿ ಸರ್ಕಾರ ವಿಶೇಷ ಅನುಕೂಲ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ಭಾರತ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಮಹಾನಗರ ಪಾಲಿಕೆ
ಸಹಯೋಗದಲ್ಲಿ ಮತದಾನ ಜಾಗೃತಿ ಮಾಡಲಾಯಿತು. ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ವಸಂತ ಹೋಬಳಿದಾರ್, ಸುಮತಿ ಕುಮಾರಸ್ವಾಮಿ, ಎಚ್.ಬಿ.ಆದಿಮೂರ್ತಿ, ಮುಕುಂದಗೌಡ, ಧರಣೇಂದ್ರ ದಿನಕರ್, ಡಾ. ಧನಂಜಯ, ಕಾರ್ಯದರ್ಶಿ ಕಿಶೋರಕುಮಾರ್, ಡಾ. ಪರಮೇಶ್ವರ ಶಿಗ್ಗಾವ್, ಸೂರ್ಯನಾರಾಯಣ್, ಎಚ್.ಎಸ್.ಗಣೇಶ್, ಅರುಣ ದೀಕ್ಷಿತ್, ಗೀತಾ ಚಿಕ್ಕವ್ಮಠ, ದಿಲೀಪ್, ಸುಪ್ರಿಯಾ, ರತ್ನಾಕರ, ಗೀತಾ, ರೇಣು, ಆರಿಫ್, ಸ್ವೀಪ್ ಸಿಬ್ಬಂದಿ, ರೋಟರಿ ಪದಾಧಿಕಾರಿಗಳು ಇದ್ದರು.