ಶಿವಮೊಗ್ಗ: ಮಕ್ಕಳಿಗೆ ಪಠ್ಯೇತರ ಕೌಶಲ್ಯಗಳನ್ನು ಕಲಿಸುವ ದೃಷ್ಠಿಯಿಂದ ಬೇಸಿಗೆ ಶಿಬಿರಗಳು ಸಹಕಾರಿ. ವಿದ್ಯಾರ್ಥಿಗಳು ಬೇಸಿಗೆ ರಜೆಯಲ್ಲಿ ಶಿಬಿರಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಮನ್ವಯ ಟ್ರಸ್ಟ್ ಅಧ್ಯಕ್ಷೆ ಗಿರಿಜಾದೇವಿ ಅಭಿಪ್ರಾಯಪಟ್ಟರು.
ಶಿವಮೊಗ್ಗದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸಮನ್ವಯ ಟ್ರಸ್ಟ್ ನಲ್ಲಿ ಐಎಎಸ್ ಅಧಿಕಾರಿ ಕೆ.ಎ.ದಯಾನಂದ ಮಾರ್ಗದರ್ಶನದಲ್ಲಿ ಆಯೋಜಿಸಿರುವ 6ನೇ ವರ್ಷದ “ಮಕ್ಕಳ ಹಬ್ಬ, ಮಕ್ಕಳಿಗಾಗಿ ವಿಶೇಷ ಉಚಿತ ಬೇಸಿಗೆ ಶಿಬಿರ” ಉದ್ಘಾಟಿಸಿ ಮಾತನಾಡಿ, ಶಿಬಿರಗಳಲ್ಲಿ ಮಕ್ಕಳಿಗೆ ಸಂವಹನ ಕೌಶಲ್ಯ, ನಾಯಕತ್ವ ಗುಣ ಸೇರಿದಂತೆ ವಿವಿಧ ರೀತಿಯ ಮಾರ್ಗದರ್ಶನ ಲಭ್ಯವಾಗುತ್ತದೆ ಎಂದು ತಿಳಿಸಿದರು.
ಶಿಕ್ಷಣದ ಜತೆಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರದಂತಹ ಪಠ್ಯೇತರ ಚಟುವಟಿಕೆಗಳು ಸಹ ಅಗತ್ಯವಾಗಿ ಬೇಕು. ಸಾಹಿತ್ಯ, ಸಂಗೀತ, ನೃತ್ಯ, ಹಾಡುಗಾರಿಕೆ ಕುರಿತ ಮಾಹಿತಿ ಹಾಗೂ ಆರಂಭಿಕ ಕಲಿಕೆಯ ಬಗ್ಗೆ ತರಬೇತಿ ನೀಡಿದಾಗ ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ಸಹಕಾರಿ ಆಗುತ್ತದೆ ಎಂದರು.
ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಮಕ್ಕಳಿಗೆ ಏಪ್ರಿಲ್ 15 ರಿಂದ 21ರವರೆಗೆ ಸಂಪೂರ್ಣ ಉಚಿತ ಶಿಬಿರ ನಡೆಯಲಿದ್ದು, ಪ್ರತಿ ದಿನ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ನಾಟಕ, ನೃತ್ಯ, ಸಂಗೀತ, ಪರಿಸರ ಕಾಳಜಿ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಒಂದು ದಿನ ಪ್ರವಾಸ, ಹೆರಿಟೇಜ್ ವಾಕ್ ಸೇರಿ ವಿಶೇಷ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಉಚಿತ ಊಟ ಉಪಾಹಾರ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.
ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ಪ್ರಮುಖರು ಪ್ರತಿ ದಿನ ಭಾಗವಹಿಸಿ ಮಾರ್ಗದರ್ಶನ ನೀಡುವರು. ಮಕ್ಕಳು ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ಶಿಬಿರಕ್ಕೆ ಮಕ್ಕಳಿಂದ ಯಾವುದೇ ಶುಲ್ಕ ಸ್ವೀಕರಿಸಿರುವುದಿಲ್ಲ. ಎಲ್ಲವೂ ಟ್ರಸ್ಟ್ ನಿಂದ ನಿರ್ವಹಿಸಲಾಗುವುದು ಎಂದರು.
ಯೋಗಗುರು ಯತೀಶ್, ವಿಜಯಕುಮಾರ್, ಚಂದನಾ, ಲಲಿತಮ್ಮ, ಸಮನ್ವಯ ಸ್ವಯಂಸೇವಕರು ಮತ್ತಿತರರು ಉಪಸ್ಥಿತರಿದ್ದರು