ಶಿವಮೊಗ್ಗ,ಏ.15: “ಚಿರತೆ ಬಂತು ಚಿರತೆ” ಚಲನಚಿತ್ರವು ಏ.19ರಂದು ರಾಜ್ಯಾದ್ಯಾದಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಜಗದೀಶ್ ಮಲ್ನಾಡ್ ತಿಳಿಸಿದರು.
ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚಿತ್ರದ ಕಥಾವಸ್ತು ಸೃಷ್ಟಿಯ ಪ್ರಾಣಿಪ್ರಪಂಚದಲ್ಲಿ ಆದಿಯಿಂದಲೂ ಇರುವ ಸಹಬಾಳ್ವೆ ಹಾಗೂ ಪರಸ್ಪರಾವಲಂಬನೆ ಮತ್ತು ಬದುಕು ಹಾಗೂ ಬದುಕಲು ಬಿಡು ಎಂಬ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ ಎಂದರು.
ಚಿತ್ರದ ಕಥೆಯು ಹಳ್ಳಿಯ ಮುಖಂಡ ಮದಾಪ್ಪನ ಮನೆಯ ಎತ್ತೊಂದನ್ನು ಚಿರತೆ ಮಾರಣಾಂತಿಕ ಘಾಸಿಗೊಳಿಸುವ ಘಟನೆಯಿಂದ ಆರಂಭವಾಗುತ್ತದೆ. ಚಿತ್ರದನಾಯಕ ಪಾರ್ಥಪ್ಪ ತನ್ನ ತಂದೆಯಿಂದ ಪರವಾನಿಗೆ ಸಹಿತ ಬಳುವಳಿ ಬಂದ ಬಂದೂಕಿನಿಂದ ಚಿರತೆಯನ್ನು ಕೊಲ್ಲುವಂತೆ ಹಳ್ಳಿ ಮುಖಂಡ ಮಾದಪ್ಪ ಒತ್ತಾಯಿಸುತ್ತಾನೆ. ಪಾರ್ಥಪ್ಪನಿಗೆ ವನ್ಯ ಪ್ರಾಣಿ ಸಂರಕ್ಷಣ ಕಾನೂನಿನ ಅರಿವಿರುವುದರಿಂದ ಹಾಗೂ ಸ್ವತಃ ಪ್ರಾಣಿ ಸಂರಕ್ಷಣೆಯ ಕಾಳಜಿ ಹೊಂದಿರುವ ಪರಿಸರ ಸ್ನೇಹಿಯಾಗಿದ್ದರಿಂದ ಚಿರತೆಯನ್ನು ಕೊಲ್ಲುವುದನ್ನು ಒಪ್ಪುವುದಿಲ್ಲ ಎಂದರು.
ಹಳ್ಳಿಯ ಜನರಿಗೆ ಚಿರತೆಯನ್ನು ಕೊಲ್ಲುವುದರಿಂದ ಕಾನೂನುರಿತ್ಯಾ ಆಗಬಹುದಾದ ಶಿಕ್ಷೆ ಹಾಗೂ ತೊಡಕುಗಳನ್ನು ತಿಳಿಹೇಳುವ ಪ್ರಯತ್ನ ಮಾಡುತ್ತಾನೆ. ಆದರೂ ಸಹ ಹಳ್ಳಿಯ ಜನ ಚಿರತೆಯಿಂದ ಪಾರಾಗಲು ಮೂಡ ನಂಬಿಕೆಯಿಂದ ಮಂತ್ರವಾದಿಯ ಮೊರೆಹೋಗುತ್ತಾರೆ. ಅರಣ್ಯ ಇಲಾಖೆಯವರು ಚಿರತೆಹಿಡಿಯಲು ಬೋನನ್ನು ಆಯಾ ಕಟ್ಟಿನ ಸ್ಥಳದಲ್ಲಿ ಇರಿಸುತ್ತಾರೆ. ಆದಾಗ್ಯೂ ಊರಿನ ಮುಖಂಡ ಲಂಚಕೊಟ್ಟು ಆತ್ಮ ರಕ್ಷಣೆಯ ನೆಪದಲ್ಲಿ ಬಂದೂಕಿನಿಂದ ಚಿರತೆಯನ್ನು ಕೊಲ್ಲಿಸುವ ಪ್ರಯತ್ನ ಮಾಡುತ್ತಾನೆ. ಅಂತ್ಯದಲ್ಲಿ ಪಾರ್ಥಪ್ಪ ಚಿರತೆ ಕೊಲ್ಲದೆ ಉಳಿಸುವ ಪ್ರಯತ್ನದಲ್ಲಿ ಗೆಲ್ಲುತ್ತಾನೋ ಅಥವಾ ಹಳ್ಳಿಯ ಜನ ಚಿರತೆಯನ್ನು ಕೊಲ್ಲುವುದರಲ್ಲಿ ಸಫಲತೆಯನ್ನು ಸಾಧಿಸುತ್ತಾರೋ ಎಂಬುವುದನ್ನು ಚಿತ್ರ ನೋಡಿಯೇ ತಿಳಿಯಬೇಕಾಗುತ್ತದೆ ಎಂದರು.
ಚಾಮರಾಜನಗರ ಸುತ್ತಮುತ್ತಲಿನಲ್ಲಿ ಚಿತ್ರದ ಚಿತ್ರಿಕರಣ ನಡೆದಿದ್ದು, ಈ ಚಿತ್ರವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಂಗಕಲಾವಿದ ಅ.ಚಿ.ಪ್ರಕಾಶ್, ಕಲಾವಿದರಾದ ಡಿ.ಆರ್.ನಾಗರಾಜ್, ಅ.ನಾ.ವಿಜಯೇಂದ್ರರಾವ್ ಉಪಸ್ಥಿತರಿದ್ದರು.