ಶಿವಮೊಗ್ಗ,ಏ.೦೫:ಏ.೬ಕ್ಕೆ ನಮ್ಮ ಪಕ್ಷದ ಸಂಸ್ಥಾಪನ ದಿನವಾಗಿದೆ. ಇದರ ಅಂಗವಾಗಿ ನಾಳೆ ಬೂತ್ ಮಟ್ಟದಿಂದ ಆಚರಣೆಯನ್ನು ಮಾಡಲಾಗುವುದು ಎಂದು ಸಂಸದ ರಾಘವೇಂದ್ರ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೧೯೮೦ರ ಏ.೬ರಂದು ನಮ್ಮ ಪಕ್ಷ ಆರಂಭವಾಯಿತು. ಇದರ ಅಂಗವಾಗಿ ರಾಷ್ಟ್ರದಾದ್ಯಂತ ನಾಳೆ ಬೂತ್ ಮಟ್ಟದಿಂದ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಗುವುದು. ಈ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುವುದು.
ಏಕತ ಮಾನವತವಾದದ ಧೈಯ ವಾಕ್ಯವನ್ನು ಇಟ್ಟುಕೊಂಡು ದೀನದಯಾಳು ಮತ್ತು ಶ್ಯಾಮ್ ಪ್ರಸಾದ್ ಮುಖರ್ಜಿಯವರ ಆಶಯದಂತೆ ಕಾರ್ಯಕರ್ತರನ್ನು ಜೋಡಿಸಿಕೊಂಡು ಎಲ್ಲಾ ಬೂತ್ಗಳಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುವುದು ಎಂದರು.
ನಮ್ಮ ಹಿರಿಯರ ಆಶಯವೇ ಕಟ್ಟ ಕಡೆಯ ವ್ಯಕ್ತಿಗೂ ಮೂಲಭೂತ ಸೌಲಭ್ಯಗಳು ದೊರಕಬೇಕು ಎಂಬುವುದು, ಆರೋಗ್ಯ, ಶಿಕ್ಷಣ, ನೀರು, ಸ್ವಾಭಿಮಾನದ ಬದುಕು ಕೊಟ್ಟಿಕೊಡುವುದು ನಮ್ಮ ಮುಖ್ಯ ಧೈಯವಾಗಿದೆ. ಇದರ ಅಡಿಯಲ್ಲಿಯೇ ನಾವು ಕೆಲಸ ಮಾಡುತ್ತೇವೆ ಎಂದರು.
ಚುನಾವಣೆ ಇನ್ನು ೩೨ ದಿನ ಬಾಕಿ ಇದೆ. ಈಗಾಗಲೇ ಬೂತ್ ಮಟ್ಟದಿಂದ ನಾವು ಪ್ರಚಾರವನ್ನು ಆರಂಭಿಸಿದ್ದೇವೆ. ಕಾರ್ಯಕರ್ತರ ಪರಿಶ್ರಮ ಎದ್ದುಕಾಣುತ್ತಿದೆ. ಮಹಿಳಾ ಸಮಾವೇಶಗಳು ಯಶಸ್ವಿಯಾಗುತ್ತಿವೆ. ಬಿಜೆಪಿ ಬಹುದೊಡ್ಡ ಪಕ್ಷವಾಗಿದೆ. ೧೮ ಕೋಟಿ ಸದಸ್ಯರು ಇಲ್ಲಿದ್ದಾರೆ. ಈಗ ಒಳ್ಳೆಯ ವಾತಾವರಣವಿದೆ. ಎಲ್ಲರೂ ಸೇರಿ ಈ ಚುನಾವಣ ರಥವನ್ನು ಯಶಸ್ವಿಯಾಗಿ ಎಳೆಯುತ್ತೇವೆ ಎಂದರು.
ಅಭಿವೃದ್ಧಿಯ ಹಾದಿಯಲ್ಲಿ ನಾವು ಸಾಗುತ್ತಿದ್ದೇವೆ. ಕಾಂಗ್ರೆಸ್ಸಿಗರು ಕೆಲವು ಆರೋಪಗಳನ್ನು ಮಾಡುತ್ತಾರೆ. ಶರಾವತಿ ಸಂತ್ರಸ್ಥರ ಸಮಸ್ಯೆ ಕಾಂಗ್ರೆಸ್ಸಿನ ಪಾಪದ ಕೂಸು, ಅದನ್ನು ನಾವು ಸರಿಮಾಡಲು ಹೊರಟ್ಟಿದ್ದೇವೆ. ಬಿಜೆಪಿಯ ಜಿಲ್ಲಾ ಮುಖಂಡರು ಎಲ್ಲರೂ ಸೇರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಚುನಾವಣೆ ಮುಗಿದ ನಂತರ ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸುವುದು ನನ್ನ ಕರ್ತವ್ಯವು ಆಗಿದೆ. ಹಾಗೆಯೇ ವಿಐಎಸ್ಎಲ್ ಕಾರ್ಖಾನೆಗೆ ಬೀಗವನ್ನು ಹಾಕಿಸಿಲ್ಲ. ಈಗಲೂ ಕಾರ್ಮಿಕರು ಅಲ್ಲಿ ಕೆಲಸ
ಮಾಡುತ್ತಿದ್ದಾರೆ. ಎಂಪಿಎಂ ಕಾರ್ಖಾನೆ ಕೂಡ ಮರುಸ್ಥಾಪನೆ ಮಾಡುವಲ್ಲಿಯೂ ಕೂಡ ಗಮನಹರಿಸುತ್ತೇನೆ ಎಂದರು.
ಶಾಹಿ ಗಾರ್ಮೆಂಟ್ಸ್ ನೀಡಿದ ಜಮೀನಿಗೆ ಸಂಬಂಧಿಸಿದಂತೆ ಬೇಳೂರು ಗೋಪಾಲಕೃಷ್ಣ ಅವರು ತನಿಖೆ ಮಾಡುವಂತೆ ಒತ್ತಾಯಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾವುದನ್ನು ಬೇಕಾದರೂ ತನಿಖೆ ಮಾಡಿಕೊಳ್ಳಲಿ, ಬೇಡ ಎಂದರೂ ಯಾರೂ ತನಿಖೆಗೆ ನಾನು ಸಿದ್ದ ಎಂದರು.
ಉದ್ಯಮಿಗಳು ಬರುವುದು ಅವರಿಗೆ ಇಷ್ಟ ಇಲ್ಲ, ವಿಮಾನ ನಿಲ್ದಾಣವನ್ನು ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ಒಳ್ಳೆಯ ವಿಮಾನ ನಿಲ್ದಾಣವಾಗಬೇಕಾದರೆ ಹೆಚ್ಚು ಜಾಗಬೇಕಾಗುತ್ತದೆ. ಮುಂದಿನ ೫೦ ವರ್ಷವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಯನ್ನು ಮಾಡುತ್ತೇವೆ. ಹಾಗೆಯೇ ಕಳೆದ ೧೦ ವರ್ಷಗಳಲ್ಲಿ ಅಡಿಕೆಯ ಬೆಲೆ ಕಡಿಮೆಯಾಗದಂತೆ ನೋಡಿಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಐಡಿಯಲ್ ಗೋಪಿ, ಮೋಹನ್, ಆನಂದ್ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆಗೊಂಡರು.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಎಸ್.ರುದ್ರೇಗೌಡ, ಪ್ರಮುಖರಾದ ಆರ್.ಕೆ.ಸಿದ್ರಾಮಣ್ಣ, ಜ್ಞಾನೇಶ್ವರ್, ಮೋಹನ್ರೆಡ್ಡಿ, ಮಾಲತೇಶ್, ನಾಗರಾಜ್ ಪ್ರಭು, ಅಣ್ಣಪ್ಪ ಮುಂತಾದವರು ಇದ್ದರು.