ಶಿವಮೊಗ್ಗ, ಫೆ. ೯:
‘ಕಾಂಗ್ರೆಸ್ ಸರ್ಕಾರದಲ್ಲಿ ೪೦% ಕಮಿಷನ್ ದಂಧೆ ನಡೆಯುತ್ತಿದೆ ಎಂಬ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರ ಆರೋಪದ ಬಗ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ನೀಡಬೇಕು’ ಎಂದು ವಿಧಾನ ಪರಿಷತ್ ಬಿಜೆಪಿ ಶಾಸಕ ಡಿ.ಎಸ್.ಅರುಣ್ ಆಗ್ರಹಿಸಿದ್ದಾರೆ.
ಈ ಕುರಿತಂತೆ ಅವರು ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಕಮಿಷನ್ ದಂಧೆ ಕುರಿತಂತೆ, ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆರೋಪ ಪುಷ್ಠಿ ನೀಡಿದಂತಾಗಿದೆ. ೪೦% ಕಮಿಷನ್ ನೀಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ ಎಂದು ಹೇಳಿರುವುದು, ಸರ್ಕಾರದ ಹಂತದಲ್ಲಿನ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ಅಸಮರ್ಥ ಸೇವೆ ಹಾಗೂ ಆಡಳಿತ ಸುಧಾರಣೆಗಾಗಿ ಅಧಿಕಾರಿಗಳ ವರ್ಗಾವಣೆಗಳಾಗುತ್ತವೆ. ಆದರೆ ಕಾಂಗ್ರೆಸ್ ಸರ್ಕಾರದ ಅಲ್ಪಾವಧಿಯಲ್ಲಿ ಗರಿಷ್ಠ ವರ್ಗಾವಣೆಗಳು ನಡೆದಿವೆ. ಇದಕ್ಕೆ ಕಮೀಷನ್ ದಂಧೆ ಮುಖ್ಯ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಸಣ್ಣಪುಟ್ಟ ಸಮಸ್ಯೆಗಳ ಪರಿಹಾರಕ್ಕೆ, ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿನ ವಿಧಾನಸೌಧಕ್ಕೆ ಜನಸಾಮಾನ್ಯರು ಬರುವಂತಾಗಿದೆ. ಅಧಿಕಾರಿಗಳನ್ನು ಮುಂದಿಟ್ಟುಕೊಂಡು ಕಮಿಷನ್ ವಸೂಲಿ ಮಾಡುತ್ತಿರುವುದರಿಂದ ಸರ್ಕಾರಿ ಕಚೇರಿಗಳಲ್ಲಿ ಜನರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.
ಈ ಕಾರಣದಿಂದ ರಾಜ್ಯದ ಮೂಲೆಮೂಲೆಯಿಂದ ಜನರು ಬಾಕಿಯಿರುವ ಕೆಲಸಕಾರ್ಯ ಮಾಡಿಸಿಕೊಳ್ಳಲು ಮುಖ್ಯಮಂತ್ರಿಗಳ ಜನಸ್ಪಂದನ ಸಭೆಗೆ ಆಗಮಿಸುವಂತಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ದಿ ಶೂನ್ಯವಾಗಿದ್ದು, ಕಮೀಷನ್ ದಂಧೆ ಜೋರಾಗಿದೆ ಎಂದು ಡಿ.ಎಸ್.ಅರುಣ್ ಅವರು ದೂರಿದ್ಧಾರೆ.