ಶಿವಮೊಗ್ಗ,ಫೆ.೦೯: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶಿವಮೊಗ್ಗದ ನಿವಾಸಿಯಾದ ಅನ್ನಪೂರ್ಣರವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಈ ಘಟನೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿತು.
ಜ.೩೦ರಂದು ಶಿವಮೊಗ್ಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅನ್ನಪೂರ್ಣಮ್ಮ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿ, ಮೈಮೇಲಿನ ಬೆಲೆ ಬಾಳುವ ಬಂಗಾರ ಇನ್ನಿತರ ವಸ್ತುಗಳನ್ನು ದೋಚಿದ್ದಾರೆ. ಮೃತ ದೇಹವನ್ನು ರೈಲಿನಿಂದ ಆಚೆ ಎಸೆದಿದ್ದಾರೆ. ಇಷ್ಟು ದಿನವಾದರು ಆರೋಪಿಗಳನ್ನು ಪತ್ತೆ ಹಚ್ಚಲು ರೈಲ್ವೆ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದರು.
ರೈಲ್ವೆಯಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಸುರಕ್ಷಿತವಿಲ್ಲ ಎಂಬುವುದಕ್ಕೆ ಇದೇ ಸಾಕ್ಷಿಯಾಗಿದೆ. ಬೋಗಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರೈಲ್ವೆ ರಕ್ಷಣಾ ಪಡೆಯನ್ನು ಹೆಚ್ಚಿಸಬೇಕು, ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು, ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ ರಾಮಕೃಷ್ಣ, ಕಾರ್ಯದರ್ಶಿ ಟಿ.ನೇತ್ರಾವತಿ, ಪ್ರಮುಖರಾದ ಮಮತಾ ರಾಘವೇಂದ್ರ, ನಾಗರತ್ನಮ್ಮ, ಸುಜಾತ ನಿಂಗೇಗೌಡ, ಮಾಲಾ ರಾಮಪ್ಪ, ಮಂಗಳ ಲಕ್ಷ್ಮೀ, ಅನುರಾಧ, ಶಶಿಕಲಾ, ಮಂಜುಳಾ, ಸರೋಜಮ್ಮ, ಶೈಲಾ, ಶೋಭಾ ಸೇರಿದಂತೆ ಹಲವರಿದ್ದರು.