ಶಿವಮೊಗ್ಗ,ಫೆ.10: ದೇಶದ್ರೋಹಿ ಹೇಳಿಕೆ ನೀಡುವವರಿಗೆ ಕಠಿಣ ಶಿಕ್ಷೆ ವಿಧಿಸುವಂತಹ ಕಾನೂನನ್ನು ಜಾರಿಗೆ ತರಬೇಕೆಂದು ಪ್ರಧಾನಮಂತ್ರಿಗಳಿಗೆ ಹಾಗೂ ಗೃಹಮಂತ್ರಿಗೆ ನಾಳೆ ಪತ್ರ ಬರೆಯುವುದಾಗಿ ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ್ರೋಹಿ ಹೇಳಿಕೆ ನೀಡಿದವರಿಗೆ ಗುಂಡಿಕ್ಕಿ ಕೊಲ್ಲುವಂತಹ ಕಾನೂನನ್ನು ಜಾರಿಗೆ ತರಲು ಪ್ರಧಾನಮಂತ್ರಿಗಳಿಗೆ ಒತ್ತಾಯಿಸಿದ್ದೇನೆ ಹೊರತು ಡಿ.ಕೆ.ಸುರೇಶ್ಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲಿ ಎಂದು ನಾನು ಹೇಳಿಲ್ಲ. ಆದರೆ, ಕಾಂಗ್ರೆಸ್ಸಿಗರು ನನ್ನ ಹೇಳಿಕೆಯನ್ನೇ ತಿರುಚಿ ಡಿ.ಕೆ.ಸುರೇಶ್ಕುಮಾರ್ ಅವರನ್ನೇ ಗುಂಡಿಕ್ಕಿ ಕೊಲ್ಲು ಎಂದು ಹೇಳಿದ್ದೇನೆ ಎಂದು ಬಿಂಬಿಸಿದ್ದಾರೆ. ನನ್ನ ಮೇಲೆ ಎಫ್ಐಆರ್ ಕೂಡ ಆಗಿದೆ. ದಾವಣಗೆರೆಯ ಪೆÇಲೀಸರು ನನಗೆ ನೋಟಿಸ್ ಕೂಡ ನೀಡಿದ್ದಾರೆ. ಇತಂಹ ನೂರು ಎಫ್ಐಆರ್ಗಳನ್ನು ದಾಖಲಿಸಿದ್ದರೂ ಕೂಡ ದೇಶಭಕ್ತನಾದ ನಾನು ಹೆದರುವುದಿಲ್ಲ, ಜಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಗುಡುಗಿದರು.
ಹಾಗೆ ನೋಡಿದರೆ ದಕ್ಷಿಣ ಭಾರತವನ್ನೇ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ನಾವು ಸಲ್ಲಿಸಬೇಕಾಗುತ್ತದೆ ಎಂದು ದೇಶ ವಿಭಜನೆಯ ಮಾತನಾಡಿರುವ ಸಂಸದ ಡಿ.ಕೆ.ಸುರೇಶ್ ಅವರನ್ನು ಬಂಧಿಸಬೇಕು. ಅದನ್ನು ಬಿಟ್ಟು ನನ್ನ ಬಂಧಿಸಿ ಎಂದು ಕಾಂಗ್ರೆಸ್ಸಿಗರು ಕರೆ ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಇತಂಹ ದೇಶದ್ರೋಹದ ಹೇಳಿಕೆಗಳು ಕೊನೆಯಾಗಬೇಕಾಗಿದೆ. ಆ ನಿಟ್ಟಿನಯಲ್ಲಿಯೇ ನಾನು ಗುಂಡಿಕ್ಕಿ ಕೊಲ್ಲುವಂತಹ ಕಾನೂನು ಜಾರಿಗೆಯಾಗಬೇಕು ಎಂದು ಹೇಳಿದ್ದು ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮಿರದವರೆಗೆ ಅಖಂಡ ಭಾರತ ನಮ್ಮದು ಎಂದಿದ್ದಾರೆ. ಇವರು ಅತ್ಯುತ್ತಮ ರಾಜಕರಣಿ. ಆದರೆ ಇಂತಹವರ ಹೊಟ್ಟಿಯಲ್ಲಿ ಪ್ರಿಯಾಂಕ ಖರ್ಗೆಯಂತಹ ಕೆಟ್ಟ ಹುಳು ಹುಟ್ಟುಕೊಂಡಿದೆ. ತಳ ಬುಡವಿಲ್ಲದೆ ಬಡಬಡಿಸುತ್ತಾರೆ. ಅಧಿಕಾರದ ಪಿತ್ತ ಇವರಿಗೆಲ್ಲ ನೆತ್ತಿಗೇರಿದೆ ಎಂದು ವಾಗ್ದಾಳಿ ನಡೆಸಿದರು.
ದೇಶವನ್ನು ವಿಭಜನೆ ಮಾಡುವ ಹೇಳಿಕೆ ನೀಡುವವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳುವುದು ತಪ್ಪೇ. ರಾಜ್ಯದ ಜನರು ಇದನ್ನು ತೀರ್ಮಾನಿಸಲಿ. ಸ್ವತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ಸಿಗರು ಇನ್ನು ಇದ್ದಾರೆ. ಆ ಹಿರಿಯರು ಡಿ.ಕೆ.ಸುರೇಶ್ಕುಮಾರ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲಿ ಮತ್ತು ಇಡಿ ಕಾಂಗ್ರೆಸ್ ನಾಯಕರು ಡಿ.ಕೆ.ಸುರೇಶ್ ಅವರಿಗೆ ಕಿವಿಹಿಂಡುವುದನ್ನು ಬಿಟ್ಟು ನನ್ನ ಹೇಳಿಕೆಯ ಟೀಕಿಸುತ್ತಿರುವುದು ಅತ್ಯಂತ ಖಂಡನೀಯ. ಮೊದಲು ಅವರಿಗೆ ನೊಟೀಸ್ ಕೊಡಲಿ ಎಂದರು.
ನನ್ನ ಹೇಳಿಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿಗರು ಆರ್ಎಸ್ಎಸ್ನ್ನು ಮಧ್ಯ ತಂದಿದ್ದಾರೆ. ಆರ್ಎಸ್ಎಸ್ ಸುದ್ದಿ ಇವರಿಗೆ ಏಕೆ ? ನನ್ನಂತಹ ಲಕ್ಷಾಂತರ ರಾಷ್ಟ್ರಪ್ರೇಮಿಗಳನ್ನು ಆರ್ಎಸ್ಎಸ್ ಸೃಷ್ಠಿಸಿದೆ. ಇದು ನಮಗೆ ದೇಶಪ್ರೇಮವನ್ನೇ ಕಲಿಸಿದೆ. ಆರ್ಎಸ್ಎಸ್ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್ಸಿಗರಿಗೆ ಇಲ್ಲ ಎಂದರು.
ನನ್ನ ವಿರುದ್ಧ ಎಷ್ಟೆ ಕೇಸು ಹಾಕಲಿ ನಾನು ಹೆದರುವುದಿಲ್ಲ. ನನಗೆ ಯಾವ ಕೇಸ್ನಲ್ಲಿಯೂ ದಂಡವನ್ನು ಹಾಕಿಲ್ಲ, ಶಿಕ್ಷೆಯೂ ಆಗಿಲ್ಲ, ಹತ್ತಾರು ಕೇಸುಗಳಲ್ಲಿ ನನಗೆ ನ್ಯಾಯ ಸಿಕ್ಕಿದೆ. ಈ ಕೇಸಿನಲ್ಲಿಯೂ ಕೂಡ ನನಗೆ ನ್ಯಾಯ ಸಿಗುತ್ತದೆ. ನಾನೇನು ಡಿ.ಕೆ.ಶಿವಕುಮಾರ್ ರೀತಿಯಲ್ಲಿ ತಿಹಾರ್ ಜೈಲಿನಲ್ಲಿ ಇದ್ದು ಬಂದಿಲ್ಲ ಎಂದು ವ್ಯಂಗ್ಯವಾಡಿದ ಅವರು, ಗೃಹಮಂತ್ರಿಗಳು ಸುರೇಶ್ ವಿರುದ್ಧ ಕೇಸು ಹಾಕಿ ಎಂದರೆ ನನಗೆ ಏಕೆ ಹೇಳಬೇಕು ಎನ್ನುತ್ತಾರೆ. ನಾನು ನಾಳೆ ಪ್ರಧಾನಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಪತ್ರ ಬರೆದು ರಾಷ್ಟ್ರದ್ರೋಹದ ಹೇಳಿಕೆ ನೀಡುವ ವ್ಯಕ್ತಿಗಳ ಬಗ್ಗೆ ಗುಂಡಿಕ್ಕಿ ಕೊಲ್ಲುವಂತಹ ಕಾನೂನನ್ನು ಜಾರಿಗೆ ತನ್ನಿ ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಬಗ್ಗೆ ಸಲ್ಲದ ಅರೋಪ ಮಾಡಿದ್ದಾರೆ. ಅವರು ಹೊಡಿ, ಬಡಿ. ಕಡಿ ಎಂದು ಈಶ್ವರಪ್ಪ ಹೇಳುತ್ತಾರೆ ಎಂದಿದ್ದಾರೆ. ಆದರೆ ನಾನು ಹಾಗೆ ಹೇಳಿಲ್ಲ. ಅವರ ಹಾಗೆ ರಾಷ್ಟ್ರಪತಿಗೆ ಹಾಗೂ ಕೇಂದ್ರದ ವಿತ್ತ ಸಚಿವರಿಗೆ ಏಕವಚನದಲ್ಲಿ ಮಾತನಾಡಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಡಿ.ಮೇಘರಾಜ್, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಇದ್ದರು.