ಶಿವಮೊಗ್ಗ,ಫೆ.೦೬: ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ ಎಂದು ಕಾಂಗ್ರೆಸ್ ನವರು ಹೊಸ ನಾಟಕ ಪ್ರಾರಂಭಿಸಿದ್ದು, ಲೋಕಾಸಭಾ ಚುನಾವಣೆಯ ಹಿನ್ನಲೆಯಲ್ಲಿ ಸರ್ಕಾರದ ದುಡ್ಡಿನಲ್ಲಿ ಪ್ರಚಾರ ಪಡೆಯಲು ಹೊರಟಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆನ್ನೆ ಲೋಕಸಭೆಯಲ್ಲಿ ವಿತ್ತಸಚಿವೆ ನಿರ್ಮಲ ಸೀತಾರಾಮ್ ಸ್ಪಷ್ಟವಾಗಿ ಉತ್ತರ ನೀಡಿದ್ದಾರೆ. ಇದು ಕಾಂಗ್ರೆಸ್‌ನ ರಾಜಕೀಯ ಪ್ರೇರಿತ ನಾಟಕ ಹಿಂದೆ ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಇಬ್ಬರು ವಿತ್ತಸಚಿವೆಯನ್ನು ಭೇಟಿಯಾದಾಗ ರಾಜ್ಯಕ್ಕೆ ಕೇಂದ್ರ ನೀಡಬಹುದಾದ ಅನುದಾನದ ಬಗ್ಗೆ ಅವರು ವಿವರಿಸಿದ್ದಾರೆ. ಮತ್ತು ವಿತ್ತಿಯ ಆಯೋಗದ ಗಮನಕ್ಕೆ ಸರ್ಕಾರ ತಂದಾಗ ಮಾತ್ರ ಕೊಡಲು ಸಾಧ್ಯ ಎಂಬುವುದನ್ನು ಕೂಡ ವಿವರಿಸಿದ್ದಾರೆ. ಹಲವು ಬಾರಿ ವಿತ್ತಸಚಿವರಾದ ಮುಖ್ಯಮಂತ್ರಿಗಳಿಗೆ ಇದರ ಅರಿವಿಲ್ಲವೇ ಎಂದರು.


ಕಾಂಗ್ರೆಸ್ ದುಡ್ಡಿನಲ್ಲಿ ಹೋರಾಟ ಮಾಡಲಿ, ಆದರೆ ಎಲ್ಲಾ ಪತ್ರಿಕೆಗಳಿಗೆ ಮಹಾತ್ಮಗಾಂಧಿ ಚಿತ್ರ ಹಾಕಿ ಸರ್ಕಾರದ ದುಡ್ಡಿನಲ್ಲಿ ಎಲ್ಲಾ ಶಾಸಕರನ್ನು ದೆಹಲಿ ಪಿಕ್‌ನಿಕ್‌ಗೆ ಕರೆದುಕೊಂಡು ಹೋಗಿ ಊಟ ತಿಂಡಿ ಖರ್ಚನ್ನು ಸರ್ಕಾರದಿಂದ ನೀಡಿ ಜನರ ತೆರಿಗೆ ಹಣ ಹಾಳುಮಾಡುತ್ತಿದ್ದಾರೆ. ಮೊದಲು ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನ ೭೧೬ ಕೋಟಿ ರೂ. ಬಿಡುಗಡೆ ಮಾಡಿ, ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಅಧಿಕೃತವಾಗಿ ಶ್ವೇತ ಪತ್ರ ಹೊರಡಿಸಿದರೆ ಕೇಂದ್ರ ಸರ್ಕಾರ ಆ ಬಗ್ಗೆ ಸರಿಯಾದ ಉತ್ತರ ನೀಡುತ್ತದೆ. ಆನಂತರ ಹೋರಾಟ ಮುಂದುವರೆಸಲಿ ಎಂದರು.


ಇದೊಂದು ರೀತಿಯಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಜನರ ತೆರಿಗೆ ದುಡ್ಡನ್ನು ದುರುಪಯೋಗ ಮಾಡುತ್ತಿದ್ದಾರೆ. ಜನ ನಿಮ್ಮ ನಾಟಕವನ್ನು ಗಮನಿಸುತ್ತಿದ್ದಾರೆ ಎಂದರು.


ಸರ್ಕಾರ ಪಾಪರ್ ಆಗಿದೆ. ಹಾಲಿನ ಹಣದಲ್ಲಿ ಕಡಿತ ಮಾಡಿದ್ದಾರೆ. ರೈತರಿಗೆ ಹಾಲಿನ ಬಾಕಿ ನೀಡದಷ್ಟು ಆರ್ಥಿಕ ದುಸ್ಥಿತಿಗೆ ಸರ್ಕಾರ ತಲುಪಿದೆ. ಇದನ್ನು ಮರೆಮಾಚಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!