ಶಿವಮೊಗ್ಗ,ಜ.೧೧: ಕೆಎಫ್ಡಿ (ಮಂಗನ ಕಾಯಿಲೆ) ಸೊಂಕಿಗೆ ಬಲಿಯಾದ ಯುವತಿಯ ಪ್ರಕರಣದ ಬಗ್ಗೆ ತನಿಖೆ ನಡೆಸಿ ಸುಳ್ಳು ವರದಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ವಿಡಿಎಲ್ ಲ್ಯಾಬ್ನ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಕೆಎಫ್ಡಿ ಜನ ಜಾಗೃತಿ ಒಕ್ಕೂಟ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರನ್ನು ಒತ್ತಾಯಿಸಿದೆ.
ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮದ ೧೮ವರ್ಷ ವಯಸ್ಸಿನ ಯುವತಿ ಕೆಎಫ್ಡಿ ಮಾರಕ ಕಾಯಿಲೆಗೆ ಜ.೮ರಂದು ಬಲಿಯಾಗಿದ್ದು, ಯುವತಿಯ ಸಾವಿನ ವಿಷಯದಲ್ಲಿ ಆರೋಗ್ಯ ಇಲಾಖೆ ವಾಸ್ತವಾಂಶಗಳನ್ನು ಮರೆಮಾಚಿ ಆಕೆಯ ಸಾವಿಗೆ ಕಾರಣವಾಗಿದೆ ಎಂದು ಒಕ್ಕೂಟದ ಸಂಚಾಲಕ ಕೆ.ಪಿ.ಶ್ರೀಪಾಲ್ ಅವರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಯುವತಿಯ ರಕ್ತದ ಮೊದಲ ಪರೀಕ್ಷೆಯಲ್ಲಿ ಕೆಎಫ್ಡಿ ಕಾಯಿಲೆಯ ವೈರಸ್ ಪತ್ತೆಯಾಗಿದ್ದರೂ ಸಹ ಫಲಿತಾಂಶ ನೆಗೆಟಿವ್ ಎಂದು ಸುಳ್ಳು ಮಾಹಿತಿ ನೀಡಿ ಆಕೆಯ ಚಿಕಿತ್ಸೆಯ ದಿಕ್ಕು ತಪ್ಪಿಸಲಾಗಿದೆ. ಆಕೆಗೆ ಸಕಾಲದಲ್ಲಿ ಸೂಕ್ತ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿದ್ದರೆ, ಆಕೆ ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು. ಆದರೆ ಜಿಲ್ಲಾ ಅರೋಗ್ಯಧಿಕಾರಿಗಳು ಸುಳ್ಳು ಫಲಿತಾಂಶ ನೀಡಿ ಆಕೆಯ ಸಾವಿಗೆ ಕಾರಣರಾಗಿದ್ದಾರೆ ಎಂದು ದೂರಿದರು.
ಅಲ್ಲದೇ ಮೃತ ಯುವತಿಯ ಸಹೋದರಿಯ ರಕ್ತ ಮಾದರಿಯ ಪರೀಕ್ಷೆಯ ಫಲಿತಾಂಶವನ್ನು ಕೂಡ ತಿರುಚಿ, ಸುಳ್ಳು ವರದಿ ನೀಡಿ ಚಿಕಿತ್ಸೆಯ ದಿಕ್ಕು ತಪ್ಪಿಸಿ ಆಕೆಯ ಜೀವಕ್ಕೆ ಅಪಾಯ ತಂದಿದ್ದಾರೆ ಎಂದರು.
ಸುಳ್ಳು ವರದಿ ನೀಡಿದ್ದರಿಂದ ಯುವತಿಗೆ ಸಕಾಲದಲ್ಲಿ ಕೆಎಫ್ಡಿ ಸೊಂಕಿಗೆ ನೀಡಬೇಕಾದ ಚಿಕಿತ್ಸೆ ನೀಡಲಾಗಲಿಲ್ಲ. ವರದಿ ನೆಗೆಟಿವ್ ಎಂದು ಬಂದ ಹಿನ್ನಲೆಯಲ್ಲಿ ಚಿಕಿತ್ಸೆ ನೀಡುವ ವೈದ್ಯರು ಸಹಜವಾಗಿಯೇ ಕೆಎಫ್ಡಿ ಹೊರತುಪಡಿಸಿ ಇತರೆ ಸಾಮಾನ್ಯ ಚಿಕಿತ್ಸೆ ನೀಡಿದ್ದಾರೆ. ಆಕೆಯ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ವೈದ್ಯರು ಮರು ಪರೀಕ್ಷೆಗೆ ರಕ್ತದ ಮಾದರಿ ಕಳುಹಿಸಿಕೊಟ್ಟಿದ್ದರು. ಪರೀಕ್ಷೆಯಲ್ಲಿ ಸೊಂಕು ದೃಡಪಟ್ಟ ವಿಚಾರವನ್ನು ಆರೋಗ್ಯ ಇಲಾಖೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ತಿಳಿಸಿಲ್ಲ. ತಾನು ಮಾಡಿದ ತಪ್ಪನ್ನು ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದೆ ಎಂದರು.
ಮೂರು ಪರೀಕ್ಷೆಗಳಲ್ಲಿ ಪಾಸಿಟಿವ್ ಫಲಿತಾಂಶ ಬರುತ್ತಲೇ ಯುವತಿಯ ಕಡೆಯವರಿಗೆ ನಗದು ರೂಪದಲ್ಲಿ ಹಣ ನೀಡಿ ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಮೆಗ್ಗಾನ್ ಆಸ್ಪತ್ರೆಯಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ಸ್ವತಃ ಡಿಹೆಚ್ಓ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯ ಉದಾಸಿನ ಮತ್ತು ಹೊಣೆಗೇಡಿತನದಿಂದ ತಪ್ಪು ವರದಿ ನೀಡಿ ಆರಂಭದಲ್ಲಿಯೇ ಚಿಕಿತ್ಸೆಯನ್ನು ದಿಕ್ಕು ತಪ್ಪಿಸಿದೆ. ಜೊತೆಗೆ ಪಾಸಿಟಿವ್ ಎಂಬುದನ್ನು ದೃಡಪಟ್ಟ ಬಳಿಕವು ಡಿಹೆಚ್ಓ ಅವರೇ ಹೇಳುವಂತೆ ಸುಸಜ್ಜಿತ ಮೆಗ್ಗಾನ್ ಆಸ್ಪತ್ರೆಯಲ್ಲಿಯೇ ಸೂಕ್ತ ಚಿಕಿತ್ಸೆ ನೀಡುವ ಬದಲು ೧೪೦ಕೀಮಿ. ದೂರದ ಖಾಸಗಿ ಆಸ್ಪತ್ರೆಗೆ ಕಳಹಿಸುವ ಮೂಲಕ ಸಮಯ ವ್ಯರ್ಥ ಮಾಡಿದ್ದಲ್ಲದೆ ಆಕೆ ಜೀವವನ್ನು ಅಪಾಯಕ್ಕೊಡ್ಡಿದ್ದಾರೆ ಎಂದು ಆರೋಪಿಸಿದರು.
ಒಟ್ಟಾರೆ ಮಲೆನಾಡಿನ ಜನರ ಪಾಲಿಗೆ ಭೀಕರ ದುಸ್ವಪ್ನವಾಗಿರುವ ಕೆಎಫ್ಡಿ ವಿಷಯದಲ್ಲಿ ಜೀವ ರಕ್ಷಕವಾಗಿ ಕೆಲಸ ಮಾಡಬೇಕಾz ಡಿಹೆಚ್ಓ ಮತ್ತು ಆರೋಗ್ಯ ಇಲಾಖೆಯೇ ಜನರ ಜೀವ ಕಂಟಕವಾಗಿ ವರ್ತಿಸಿದೆ. ಯುವತಿಯ ಸಾವು ಸಹಜ ಸಾವಲ್ಲ. ಅದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದರು.
ಒಕ್ಕೂಟದ ಸಂಚಾಲಕ ಶಶಿ ಸಂಪಳ್ಳಿ ಮಾತನಾಡಿ, ಕೆಎಫ್ಡಿ ಸೊಂಕಿಗೆ ಬಲಿಯಾದ ಯುವತಿಯ ಪ್ರಕರಣವನ್ನು ಉನ್ನತ ತನಿಖೆಗೆ ಸರ್ಕಾರ ಆದೇಶಿಸಬೇಕು. ಜೊತೆಗೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವುದರಿಂದ ಕೂಡಲೇ ವಿಡಿಎಲ್ ಲ್ಯಾಬ್ಗೆ ಬೀಗ ಮುದ್ರೆ ಹಾಕಿ ಅಲ್ಲಿನ ದತ್ತಾಂಶ ಮತ್ತು ಇತರೆ ಸಾಕ್ಷಿಗಳನ್ನು ರಕ್ಷಿಸಬೇಕು. ಮೃತ ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಆಕೆಯ ಸಹೋದರಿಯ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಅರೋಗ್ಯ ಇಲಾಖೆ ಭರಿಸಬೇಕೆಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ನವಲೆ, ಸುರೇಶ್ ಅರತಾಳು ಉಪಸ್ಥಿತರಿದ್ದರು.