ಶಿವಮೊಗ್ಗ: ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯ ನೂತನ ಕಟ್ಟಡ ನಿರ್ಮಾಣ, ಪೊಲೀಸ್ ಇಲಾಖೆಗೆ ಸೇರಿದ ಎಲ್ಲಾ ವಿಭಾಗಗಳನ್ನು ಇದೇ ಕಚೇರಿ ಆವರಣದೊಳಗೆ ಕ್ರೂಢೀಕರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಇಂದು ಬೆಳಗ್ಗೆ ಮಾನವ ಹಕ್ಕುಗಳ ಕಮಿಟಿ ಮುಖ್ಯಮಂತ್ರಿಗಳಿಗೆ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಗಳಾದ ಮಾದಪ್ಪ ಹಾಗೂ ಹರೀಶ್ ಅವರ ಮೂಲಕ ಮನವಿ ಸಲ್ಲಿಸಿತು.
ಈ ಹಿಂದೆ ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಚಿಂತನೆ ನಡೆಸಿ ಕಾರ್ಯರೂಪಕ್ಕೆ ತಂದಿರುವುದು ಅತ್ಯಂತ ಶ್ಲಾಘನೀಯ ಹಾಗೂ ಗೌರವಾನ್ವಿತವಾದುದು. ಇದರ ಜೊತೆಗೆ ಪೊಲೀಸ್ ಇಲಾಖೆಯ ಹೊಸ ಹೊಸ ಕಟ್ಟಡಗಳ ನಿರ್ಮಾಣಕ್ಕೆ ತಾವುಗಳು ಹಿಂದೆ ಸಾಕಷ್ಟು ಅನುದಾನ ನೀಡಿದ್ದೀರಿ. ತಮಗೆ ಆತ್ಮೀಯ ಅಭಿನಂದನೆಗಳು ಎಂದು ಮನವಿಯಲ್ಲಿ ತಿಳಿಸಿದೆ.
ಕಳೆದ ಒಂದು ವರ್ಷದಿಂದ ಮುಖ್ಯಮಂತ್ರಿಯಾಗಿ ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವ ತಾವುಗಳು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ನೂತನ ಕಟ್ಟಡ ನಿರ್ಮಾಣ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳನ್ನು ಒಂದೇ ಆವರಣದಲ್ಲಿ ತರುವ ಮೂಲಕ ಸರ್ಕಾರ ನೀಡುವ ಬಾಡಿಗೆ ಉಳಿಸುವ ಜೊತೆಗೆ ಸಾರ್ವಜನಿಕರ ಸುಲಲಿತ ಕಾರ್ಯಕ್ಕೆ ಮುಂದಾಗುವಂತೆ ವಿನಂತಿಸಿದೆ.
ಪೊಲೀಸ್ ಇಲಾಖೆಯ ಹೊಳಲೂರು, ಆಯನೂರು, ಕೋಣಂದೂರು ಸೇರಿದಂತೆ ಹಲವು ಉಪಠಾಣೆಗಳು ಹೊಸ ಕಟ್ಟಡಗಳಾಗಲಿ. ಅಂತೆಯೇ ಶಿವಮೊಗ್ಗ ಲೋಕಾಯುಕ್ತ, ಎಸಿಬಿ ಮೆಸ್ಕಾಂ ಜಾಗೃತ ದಳ, ಆಂತರಿಕ ವಿಭಾಗ ಸೇರಿದಂತೆ ಪೊಲೀಸ್ ಇಲಾಖೆಗೆ ಸೇರಿದ ಎಲ್ಲಾ ಇಲಾಖೆಗಳನ್ನು ಇದೇ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯ ಆವರಣದೊಳಗೆ ಕ್ರೂಢೀಕರಿಸುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಇದರಿಂದ ಇಲಾಖೆಯ ಕಾರ್ಯಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.
ಹಿರಿಯ ಅಧಿಕಾರಿಗಳ ಕಛೇರಿ ಸೇರಿದಂತೆ ಎಲ್ಲ ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸುವುದು.
ಶಿವಮೊಗ್ಗ ಪೊಲೀಸ್ ಠಾಣೆಗಳಲ್ಲಿ ಹಿಂದೆ ಇದ್ದ ಡಿ ದರ್ಜೆಯ ನೌಕರರನ್ನು ಕೈಬಿಡಲಾಗಿದೆ. ಹಾಗಾಗಿ ಕೂಡಲೇ ಗುತ್ತಿಗೆ ಆಧಾರದ ಮೂಲಕ ನೌಕರರ ನೇಮಕಕ್ಕೆ ಕೈಗೊಳ್ಳಬೇಕು. ನೊಂದು ಸಮಸ್ಯೆ ಹೇಳಲು ಪೊಲೀಸ್ ಠಾಣೆಗೆ ಬರುವ ಸಾರ್ವನಿಕರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವಂತಹ ವ್ಯವಸ್ಥೆಯನ್ನು ಎಲ್ಲಾ ಠಾಣೆಗಳ ಎದುರು ಮಾಡುವಂತೆ ವಿನಂತಿಸಿದೆ.
ಈ ಸಂದರ್ಭದಲ್ಲಿ ಕಮಿಟಿಯ ರಾಜ್ಯಾಧ್ಯಕ್ಷ ಕೆ.ನಾಗರಾಜ್, ರಾಜ್ಯ ಮಾಧ್ಯಮ ಸಲಹೆಗಾರ ಎಸ್.ಕೆ.ಗಜೇಂದ್ರಸ್ವಾಮಿ, ಜಿಲ್ಲಾಧ್ಯಕ್ಷ ದಯಾನಂದ್, ಪ್ರಮುಖರಾದ ಶಾರಾದ ಶೇಷಗಿರಿಗೌಡ, ವಿನೋದ್, ಉಮೇಶ್, ಉಷಾ ಉತ್ತಪ್ಪ, ಫರ್ವಿನ್, ಹೀರಾ ಬಿ. ಸಂದೀಪ್, ರಾಘವೇಂದ್ರ, ರವಿಕುಮಾರ್, ರಮೇಶ್ ಬಸಪ್ಪ, ರಮೇಶ್ ಆರ್, ಆರ್ಯನ್ ಮಾರುತಿ, ವಿರೇಶಪ್ಪ, ಎ.ರವಿ ಹಾಗೂ ಇತರರಿದ್ದರು.