ಸಾಗರ : ನೂತನ ಸರ್ಕಾರದಲ್ಲಿ ಶಿವಮೊಗ್ಗ ಜಿಲ್ಲೆಯ ಇಬ್ಬರು ಶಾಸಕರಾದ ಗೋಪಾಲಕೃಷ್ಣ ಬೇಳೂರು ಮತ್ತು ಮಧು ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಶ್ರೀಧರ ಮೂರ್ತಿ ಮನವಿ ಮಾಡಿದ್ದಾರೆ
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಮತದಾರರು ದೊಡ್ಡ ಪ್ರಮಾಣದಲ್ಲಿ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸಿದ್ದು, ಇಬ್ಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಸರ್ಕಾರ ಅವಕಾಶ ನೀಡಬೇಕು. ಸಾಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ನೀಡುವುದರಿಂದ ನಿಂತು ಹೋಗಿರುವ ಅಭಿವೃದ್ದಿ ಕೆಲಸಕ್ಕೆ ಚಾಲನೆ ನೀಡಿದಂತೆ ಆಗುತ್ತದೆ ಎಂದರು.
ಈ ಬಾರಿ ಹಣಬಲ ಮತ್ತು ಜನಬಲದ ನಡುವೆ ಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಸುಮಾರು ೪೦ ಕೋಟಿ ರೂ. ಹಣ ಖರ್ಚು ಮಾಡಿದ್ದಾರೆ. ಮನೆಯೊಂದಕ್ಕೆ ೩ ರಿಂದ ೧೦ಸಾವಿರ ರೂಪಾಯಿ ಕೊಟ್ಟರೂ ಬೇಳೂರು ಜನಪ್ರಿಯತೆ ಎದುರು ಅವರು ಸೋಲು ಅನುಭವಿಸಿದ್ದಾರೆ. ಬೇಳೂರು ಅವರ ಮಾತೃಹೃದಯಿ ವ್ಯಕ್ತಿತ್ವಕ್ಕೆ ಜಯ ಸಿಕ್ಕಿದೆ. ಗೋಪಾಲಕೃಷ್ಣ ಬೇಳೂರು ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಎಲ್ಲರನ್ನೂ ಒಟ್ಟಾಗಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ತೆಗೆದುಕೊಂಡು ಹೋಗಿದ್ದರು. ಈಗಲೂ ಸಹ ಅದಕ್ಕೆ ಬದ್ದರಾಗಿರುತ್ತಾರೆ ಎಂದು ಹೇಳಿದರು.
ನನ್ನ ನೇತೃತ್ವದ ದೇಶಿ ಫೌಂಡೇಶನ್‌ನಿಂದ ಕ್ಷೇತ್ರದ ಸಮಸ್ಯೆ ಕುರಿತು ಮಿಸ್ಡ್ ಕಾಲ್ ಅಭಿಯಾನ ನಡೆಸಲಾಗಿತ್ತು. ಸುಮಾರು ೧೨ಸಾವಿರ ಜನರು ಮಿಸ್ಡ್ ಕಾಲ್ ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಪೈಕಿ ಶೇ. ೮೦ರಷ್ಟು ಜನರು ಮಾಜಿ ಶಾಸಕ ಹಾಲಪ್ಪ ಹರತಾಳು ಅವರ ಭ್ರಷ್ಟಾಚಾರ, ಗೂಂಡಾಗಿರಿ, ದಬ್ಬಾಳಿಕೆ ಇನ್ನಿತರೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಆಗಲೇ ನಮಗೆ ಬೇಳೂರು ಗೆಲುವು
ಖಚಿತ ಎನಿಸಿತ್ತು. ಸುಮಾರು ೩೫ಸಾವಿರ ಮತಗಳ ಅಂತರದಿಂದ ಬೇಳೂರು ಗೆಲ್ಲುತ್ತಾರೆ ಎಂದು ನಾವು ಸಮೀಕ್ಷೆ ನಡೆಸಿದ್ದೇವು. ಆದರೆ ಹಾಲಪ್ಪ ಹಣ ಹಂಚಿದ್ದರಿಂದ ಗೆಲುವಿನ ಅಂತರ ಕಡಿಮೆಯಾಗಿದೆ ಎಂದರು.
ಗೋಷ್ಟಿಯಲ್ಲಿ ಆನಂದ್ ಭೀಮನೇರಿ, ಚಂದ್ರಶೇಖರ ಸೂರಗುಪ್ಪೆ, ಚಂದ್ರಕಾಂತ್ ಆರೋಡಿ, ಲಿಂಗರಾಜ್ ಆರೋಡಿ, ನಾರಾಯಣ ಸೂರನಗದ್ದೆ, ಶ್ರೀನಾಥ್, ಅನ್ವರ್ ಭಾಷಾ, ಗಿರೀಶ್ ಕೋವಿ, ಸೋಮಶೇಖರ್, ಕೃಷ್ಣಮೂರ್ತಿ, ಹನೀಫ್ ಕುಂಜಾಲಿ ಹಾಜರಿದ್ದರು. (ಫೋಟೋ-ಪ್ರೆಸ್‌ಮೀಟ್)