ಶಿವಮೊಗ್ಗ : ನಿನ್ನೆ ತಡರಾತ್ರಿ 12:30 ರ ಸುಮಾರಿನಲ್ಲಿ ಕಜಾಕಿಸ್ತಾನದಿಂದ ತಮಗೆ ಬೆದರಿಕೆ ಕರೆ ಬಂದಿದ್ದು, ಈಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಅವರು, ನಿನ್ನೆ ರಾತ್ರಿ ವಿದೇಶದಿಂದ ಕರೆ ಬಂದಿದ್ದು, ಬೆಳಿಗ್ಗೆ ನೋಡಿದಾಗ ಮೊಬೈಲ್‌ನಲ್ಲಿ ಮಿಸ್ಡ್ ಕಾಲ್ ಇರುವುದು ಗಮನಕ್ಕೆ ಬಂದಿದೆ. ಈ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೂ ಬೆದರಿಕೆ ಬಂದಿತ್ತು. ಈ ಕುರಿತು ಎನ್‌ಐಎ ತನಿಖೆ ಮಾಡಿ, ಸಾಹಿಲ್ ಶೇಖ್ ಎಂಬಾತನ ಬಂಧನವಾಗಿತ್ತು. ನಿನ್ನೆಯ ಮಿಸ್ಡ್ ಕಾಲ್ ಇದಕ್ಕೆ ಲಿಂಕ್ ಇರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, ಸೂಕ್ತ ತನಿಖೆ ಮಾಡುವಂತೆ ಜಿಲ್ಲಾರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದರು.


ರಾಜ್ಯದಲ್ಲಿ ರಾಷ್ಟ್ರ ವಿರೋಧಿ ಚಟುವಟಿಕೆ ನಡೆಯುತ್ತಿದೆ. ಬೆಳಗಾವಿಯಲ್ಲಿ ಪಾಕ್ ಪರ ಘೋಷಣೆ ಕೂಗಲಾಗಿದ್ದು, ಈ ಬಗ್ಗೆ ಬೆಳಗಾವಿಯ ತಿಲಕವಾಡಿ ಠಾಣೆಯಲ್ಲಿ ಸೂಮೊಟೊ ದೂರು ದಾಖಲಾಗಿದೆ. ಕಾಂಗ್ರೆಸ್ ಶಾಸಕ ಆಸಿಫ್ ಸೇಟ್ ಇದನ್ನು ಒಪ್ಪಿಕೊಂಡಿದ್ದಾರೆ. ಶಿರಸಿಯಲ್ಲೂ ಹಸಿರು ಧ್ವಜ ಹಾರಾಟವಾಗಿದೆ. ಪಾಕ್ ಪರ ಏಜೆಂಟರು ನಮ್ಮ ರಾಜ್ಯದಲ್ಲಿ ಚಿಗುರೊಡೆಯುತ್ತಿದ್ದಾರೆ. ಕೋಮುವಾದಿ ಬಿಜೆಪಿ ಸೋಲಿಸಬೇಕು ಎಂದು ಕರೆ ಕೊಟ್ಟಿದ್ದರು. ಈಗ ಸಿಎಂಗಾಗಿ ಜಾತಿ ಲಾಬಿ ನಡೆಯುತ್ತಿದೆ. ಎಲ್ಲಿ ಹೋಯ್ತು ಇವರ ಜತ್ಯಾತೀತವಾದ. ನೇರವಾಗಿ ಇವರು ಜಾತಿವಾದಿ ಅಂತ ಒಪ್ಪಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.


ಎಂ.ಎಲ್.ಸಿ. ಬೋಜೇಗೌಡ ಬಹಿರಂಗವಾಗಿ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದು, ಪಕ್ಷದ ಅಭ್ಯರ್ಥಿ ಸೋತರೂ ಕ್ಷೀರಾಭಿಷೇಕ ಮಾಡಿಸಿದ್ದಾರೆ. ಇಂತಹ ಲಜ್ಜೆಗೆಟ್ಟ ರಾಜಕೀಯ ನಾನೆಂದೂ ನೋಡಿಲ್ಲ. ಅವರ ಪಕ್ಷದ ಮುಖಂಡರು ಏನು ಕ್ರಮ ಕೈಗೊಳ್ತಾರೊ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.


ಶಿವಮೊಗ್ಗ ಮತದಾರರಿಗೆ ಅಭಿನಂದನೆ
ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಸಾಧಿಸಿದ್ದು, ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಿವಮೊಗ್ಗ ಮತದಾರರು ಜಾತಿಯ ಒತ್ತಡಕ್ಕೆ ಮಣಿದಿಲ್ಲ. ಕಾರ್ಯಕರ್ತರ ಸಂಘಟನೆ ಬಿಜೆಪಿ ಗೆಲುವಿಗೆ ಕಾರಣ. ನಮ್ಮ ಅಭಿವೃದ್ಧಿ ಕಾರ್ಯಗಳು ಮೆಚ್ಚಿ ಜನ ಮತ ಹಾಕಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.


ನಮ್ಮ ನಾಯಕರು ಕ್ಷೇತ್ರಕ್ಕೆ ಬಂದು ಕಾರ್ಯಕರ್ತರನ್ನು ಹುರುದುಂಬಿಸಿದ್ದರು. ರಾಜ್ಯದಲ್ಲೂ ಬಿಜೆಪಿಗೆ ಹೆಚ್ಚು ಬೆಂಬಲ ಸಿಕ್ಕಿದೆ. ಸ್ಥಾನ ಕಡಿಮೆ ಇರಬಹುದು. ಆದರೆ ಮತಗಳಿಕೆಯಲ್ಲಿ ಹೆಚ್ಷಳ ಆಗಿದೆ. ಜನರು ಇಟ್ಟ ವಿಶ್ವಾಸಕ್ಕೆ ಪಕ್ಷ ಋಣಿಯಾಗಿದೆ. ಪ್ರತಿಪಕ್ಷವಾಗಿ ಬಿಜೆಪಿ ಸಮರ್ಥವಾಗಿ ಕೆಲಸ ಮಾಡಲಿದೆ ಎಂದರು.


ಜನ ಬೆಂಬಲ ನೋಡಿದರೆ ಲೋಕಸಭೆಯಲ್ಲಿ ವಿಶ್ವಾಸ ಇಟ್ಟುಕೊಳ್ಳುತ್ತೇವೆ. ಕಳೆದ ಬಾರಿ ೩೫ ಸ್ಥಾನ ಲೋಕಸಭೆಯಲ್ಲಿ ಸಿಕ್ಕಿತ್ತು. ಮುಂದಿನ ಬಾರಿ ಇದಕ್ಕೂ ಹೆಚ್ಚು ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!