ಸಂತ ಸೇವಲಾಲರು ಬಂಜಾರ ಸಮುದಾಯ ನೆಮ್ಮದಿಯ ಜೀವನ ನಡೆಸಲು ದಾರಿ ತೋರಿಸಿದರು. ಸಮಾಜ ಅವರನ್ನು ದಾರ್ಶನಿಕ ಎಂದು ಪೂಜ್ಯ ಭಾವನೆಯಿಂದ ಕಾಣುತ್ತಿದ್ದು, ಅವರ ಆಷೋತ್ತರಗಳನ್ನು ಈಡೇರಿಸಲು ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರ ಬಂಜಾರ ಸಮುದಾಯಕ್ಕೆ ನೀಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅವರು ಸುಮಾರು ೧೨ಕೋಟಿ ವೆಚ್ಚದಲ್ಲಿ ಇಲ್ಲಿನ ಬಾಲರಾಜ್ ಅರಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬಂಜಾರ ಸಮುದಾಯ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಂಜಾರ ಸಮುದಾಯ ಕೇಳಿದ ಎಲ್ಲಾ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸುತ್ತಾ ಬಂದಿದೆ. ಸಮುದಾಯದ ಹಲವರಿಗೆ ಗೌರವಾನ್ವಿತ ಹುದ್ದೆ ನೀಡಿದೆ. ಬಂಜಾರ ಸಮುದಾಯದ ಯಾರೊಬ್ಬರು ಕೂಡ ಗುಡಿಸಲಿನಲ್ಲಿ ವಾಸಮಾಡಬಾರದು ಎಲ್ಲರೂ ವಿದ್ಯಾವಂತರಾಗಬೇಕು ಎಂಬುದು ಸರ್ಕಾರದ ಇಚ್ಚೆ. ಅದಕ್ಕಾಗಿ ಲಂಬಾಣಿ ಸಮುದಾಯವನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಕರ್ನಾಟಕ ತಾಂಡ ನಿಗಮ ಮಂಡಳಿ ಸ್ಥಾಪಿಸಲಾಗಿದೆ. ಸ್ವತಃ ಪ್ರಧಾನಿಯವರೆ ಗುಲ್ಬರ್ಗದ ಕಲಬುರ್ಗಿಯಲ್ಲಿ ೫೨ ಸಾವಿರ ಹಕ್ಕುಪತ್ರವನ್ನು ತಾಂಡ ನಿವಾಸಿಗಳಿಗೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ೫ ಸಾವಿರ ಹಕ್ಕುಪತ್ರ ಸಿದ್ಧವಾಗಿದ್ದು, ವಿತರಿಸುವ ಯೋಜನೆ ರೂಪಿಸಲಾಗಿದೆ. ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಎಲ್ಲಾ ಪ್ರಯತ್ನವನ್ನು ಸರ್ಕಾರ ಮಾಡಿದೆ. ಈ ಸಮುದಾಯದ ಜನ ಶ್ರಮಜೀವಿಗಳು ಇತಿಹಾಸದಲ್ಲಿ ಬರೆದಿಡುವ ಸಮಾರಂಭ ಇದು ಎಂದರು.
ಸೂರೇಗೊಂಡನ ಕೊಪ್ಪದಲ್ಲಿ ನೂತನ ರೈಲ್ವೆಮಾರ್ಗ ಹಾದುಹೋಗಲಿದ್ದು, ರಾಷ್ಟ್ರ ಮಟ್ಟದ ಪ್ರವಾಸಿಗರು ಬಂದು ಹೋಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ಅಲ್ಲಿ ರೈಲ್ವೆ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ಸಂಸದರು ನೆರವೇರಿಸಲಿದ್ದಾರೆ. ನೀವು ಕೇಳಿದ ಎಲ್ಲವನ್ನು ಈಡೇರಿಸಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವೆ ಎಂದರು.
ಗೃಹ ಸಚಿವ ಆರಗಜ್ಞಾನೇಂದ್ರ ಮಾತನಾಡಿ, ಅತ್ಯಂತ ಪುರಾತನ ಹಾಗೂ ಶ್ರೀಮಂತ ಸಂಸ್ಕೃತಿ ಹೊಂದಿರುವ ಅತ್ಯಂತ ಪ್ರಾಮಾಣಿಕ ಸಮುದಾಯವಿದು ಎಂದರು.
ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ, ಬಂಜಾರ ಸಮುದಾಯ ಅತ್ಯಂತ ಬುದ್ಧಿವಂತ ಸಮುದಾಯವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಈ ಸಮುದಾಯದ ಜನರಿದ್ದಾರೆ. ಸರ್ಕಾರ ನಿಮ್ಮ ಜೊತೆಯಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಇವರು ಕೇವಲ ಅಲೆಮಾರಿಗಳಲ್ಲ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಆಶು ಕವಿಗಳು ಹೌದು. ಸ್ಥಳದಲ್ಲೇ ಹಾಡುಕಟ್ಟಿ ಹಾಡುವ ನೈಪುಣ್ಯತೆಯನ್ನು ಹೊಂದಿದ್ದಾರೆ. ಯಾವ ಸಮುದಾಯಕ್ಕೂ ಇವರು ಕಡಿಮೆಯಿಲ್ಲ ಎಂದರು.
ಶಾಸಕ ಕೆ.ಬಿ.ಅಶೋಕ್‌ನಾಯ್ಕ್ ಮಾತನಾಡಿ, ತಾನು ಸಮುದಾಯದ ಜಿಲ್ಲಾಧ್ಯಕ್ಷನಾದ ಮೇಲೆ ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯದಲ್ಲಿ ಎಲ್ಲೂ ಇಲ್ಲದ ಒಂದು ದೊಡ್ಡ ಕೊಡುಗೆಯನ್ನು ಸಮಾಜಕ್ಕೆ ನೀಡುವಲ್ಲಿ ಪ್ರಯತ್ನಿಸಿದ್ದೇನೆ. ಸರ್ಕಾರ ಬಂಜಾರ ಸಮುದಾಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ ಎಂದು ಸ್ಮರಿಸಿದರು.
ಸಮಾರಂಭದಲ್ಲಿ ಖ್ಯಾತ ಗಾಯಕಿ ಸಮಾಜದ ಹೆಣ್ಣು ಮಗಳಾದ ಮಂಗ್ಲಿ ಅವರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಿ.ಎಸ್.ಷಡಕ್ಷರಿ, ಎನ್.ಜಿ.ನಾಗರಾಜ್, ಸುರೇಖಾ ಮುರುಳೀಧರ್, ಕೆ.ಎಸ್.ಗುರುಮೂರ್ತಿ, ಎಸ್.ಬಳೀಗಾರ್, ಹಾಗೂ ಜಿಲ್ಲಾ ಬಂಜಾರ ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು