: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಹೊಸನಗರ ರಸ್ತೆಯಲ್ಲಿರುವ ರಾಯಲ್ ಕಂಫರ್ಟ್ಸ್ ಲಾಡ್ಜ್‌ನಲ್ಲಿ ತೆರೆಯುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ರಿಪ್ಪನ್‌ಪೇಟೆಯ ಮೊಹಿಯಿದ್ದೀನ್ ಜುಮ್ಲಾ ಮಸೀದಿ, ಸರ್ವ ಪಕ್ಷಗಳ ಒಕ್ಕೂಟ ಹಾಗೂ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಯಲ್ ಕಂಫರ್ಟ್ಸ್ ಲಾಡ್ಜ್ ಪಕ್ಕದಲ್ಲಿ ಅರೆಬಿಕ್ ಪಾಠಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಲಾಡ್ಜ್ ಕೇವಲ ೫೦ ಮೀಟರ್ ಒಳಗಿದೆ. ದೇವಸ್ಥಾನ, ಮಸೀದಿ, ಚರ್ಚ್ ವಿದ್ಯಾಕೇಂದ್ರಗಳು ೧೦೦ ಮೀಟರ್ ಒಳಗಿದ್ದರೆ ಸಿ.ಎಲ್.-೭ ಲೈಸೆನ್ಸ್ ನೀಡದಿರಲು ಕಾನೂನಿದೆ. ಆದರೆ ಲಾಡ್ಜ್ ಬಳಿ ಪುರಾತನವಾದ ಪವಿತ್ರ ಮೊಹಿಯಿದ್ದೀನ್ ಜುಮ್ಲಾ ಮಸೀದಿ ಇದ್ದು, ಅದರಲ್ಲಿಯೇ ಅರೆಬಿಕ್ ಶಾಲೆ ಸಹ ನಡೆಯುತ್ತಿದೆ. ಆದರೂ ಲಾಡ್ಜ್ ಮಾಲೀಕ ಜಯಪ್ರಕಾಶ್ ಶೆಟ್ಟಿ ಸರ್ಕಾರಕ್ಕೆ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಬಾರ್ ಅಂಡ್ ರೆಸ್ಟೋರೆಂಟ್‌ಗೆ ಪರವಾನಿಗೆ ಪಡೆಯಲು ಹುನ್ನಾರ ನಡೆಸಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.
ಹೊಸನಗರದ ಅಬಕಾರಿ ನಿರೀಕ್ಷಕರು ಪರವಾನಿಗೆಯಿಂದ ಯಾವುದೇ ಧಾರ್ಮಿಕ ಕೇಂದ್ರ ಹಾಗೂ ಸಾರ್ವಜನಿಕರಿಗೆ ಭಂಗ ಉಂಟಾಗುವುದಿಲ್ಲ ಎಂದು ಅರ್ಜಿ ಸಲ್ಲಿಸಿದವರ ಪರವಾಗಿ ಉದ್ಘೋಷಣೆಯನ್ನು ಅವೈಜ್ಞಾನಿಕವಾಗಿ ಹಿಂಬರಹದಲ್ಲಿ ನೀಡಿದ್ದಾರೆ. ಲಾಡ್ಜ್‌ನೊಳಗೆ ಬಾರ್ ಅಂಡ್ ರೆಸ್ಟೋರೆಂಟ್ ತೆರೆಯಲು ನಮ್ಮ ವಿರೋಧವಿದೆ. ಮಸೀದಿಯ ಭಕ್ತರು, ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ಪರವಾನಿಗೆ ನೀಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ವಿವಿಧ ಪಕ್ಷದ ಮುಖಂಡರಾದ ಕಲ್ಲೂರು ಮೇಘರಾಜ್, ಎನ್.ಸತೀಶ್, ಸುರೇಶ್ ಸಿಂಗ್, ಆರ್.ಎ. ಚಾಬೂಸಾಬ್, ಆರ್.ಎ. ಅಮೀರ್ ಹಂಜಾ, ಆರ್.ಎ. ಮಹಮ್ಮದ್ ರಫಿ, ಓಬೇದುಲ್ಲಾ, ಆಶೀಫ್ ಭಾಷಾ, ಸಂತೋಷ್, ಆರ್.ಟಿ. ಗೋಪಾಲ, ಎಸ್.ವಿ. ರಾಜಮ್ಮ, ಲಿಂಗರಾಜ್, ಶಂಕ್ರಾ ನಾಯ್ಕ ಹಾಗೂ ಇನ್ನಿತರರು ಇದ್ದರು.