ಶಿವಮೊಗ್ಗ: ಬಹುನಿರೀಕ್ಷಿತ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಫೆ.೨೭ರಂದು ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ.


ನಿನ್ನೆ ಸಂಜೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಸೋಗಾನೆಯಲ್ಲಿ ನಿರ್ಮಾಣ ವಾಗುತ್ತಿರುವ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿ ನವದೆಹಲಿಗೆ ತೆರಳಿದ್ದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಯಾಗಿದ್ದೆ. ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಬೇಕೆಂದು ಅವರಲ್ಲಿ ಮನವಿ ಮಾಡಿದ್ದೆ. ನನ್ನ ಮನವಿಗೆ ಪ್ರಧಾನಿ ನರೇಂದ್ರ ಮೋದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ . ಫೆ,೨೭ರಂದು ವಿಮಾನ ನಿಲ್ದಾಣ ಉದ್ಘಾಟನೆಗೆ ಆಗಮಿಸಲಿದ್ದಾರೆ ಎಂದು ಹೇಳಿದರು.


ದೇಶದಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ (೪೪೯.೨೨ ಕೋಟಿ ರೂ.)ನಿರ್ಮಾಣ ವಾಗಿರುವ ವಿಮಾನ ನಿಲ್ದಾಣ ಇದಾಗಿದೆ. ಶೇ.೩ರಷ್ಟು ಕಾಮಗಾರಿ ಬಾಕಿ ಇದೆ. ನಿಗದಿತ ಸಮಯದಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ. ಬೆಂಗಳೂರು ಬಳಿಕ ರಾಜ್ಯದಲ್ಲಿ ಅತ್ಯಂತ ವಿಶೇಷವಾದ ಹಾಗೂ ಸುಸಜ್ಜಿತವಾದ ವಿಮಾನ ನಿಲ್ದಾಣ ಇದಾಗಲಿದೆ. ರಾತ್ರಿ ವೇಳೆಯಲ್ಲೂ ಇಲ್ಲಿ ವಿಮಾನ ಲ್ಯಾಂಡ್ ಆಗಲಿದ್ದು, ಅತ್ಯಂತ ಸುಸಜ್ಜಿತ ಹಾಗೂ ಎಲ್ಲಾ ವ್ಯವಸ್ಥೆ ಇರುವ ವಿಮಾನ ನಿಲ್ದಾಣ ಇದಾಗಿದೆ. ಇಂತಹ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ನೀಡಿದ ರೈತರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದರು.


ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಮಾತನಾಡಿ, ಬಹುತೇಕ ಕಡೆ ವಿಮಾನ ನಿಲ್ದಾಣ ಸಿದ್ಧಗೊಂಡು ಹಲವು ತಿಂಗಳ ಬಳಿಕ ವಿಮಾನಯಾನ ಆರಂಭಗೊಂಡ ನಿದರ್ಶನವಿದೆ. ಆದರೆ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡ ದಿನದಿಂದಲೇ ವಿಮಾನಯಾನ ಆರಂಭವಾಗಬೇಕೆಂಬುದು ನಮ್ಮ ಬಯಕೆಯಾಗಿದೆ. ಈಗಾಗಲೇ ಏರ್‌ಲೈನ್ಸ್‌ನ ವಿವಿಧ ೩೨ ಸಂಸ್ಥೆಗಳೊಂದಿಗೆ ಮಾತುಕತೆ ನಡೆದಿದೆ. ಈ ಪೈಕಿ ಸ್ಟಾರ್ ಏರ್ ಲೈನ್ಸ್ ವಿಮಾನ ಸೇವೆ ನೀಡಲು ಮುಂದಾಗಿದೆ. ಮೊದಲಿಗೆ ಶಿವಮೊಗ್ಗ-ಬೆಂಗಳೂರು ನಡುವೆ ವಿಮಾನ ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದರು.


೭,೫೦೦ ಕೋಟಿ ರೂ. ಮೊತ್ತದ ಕಾಮಗಾರಿ ಪ್ರಧಾನಿ ನರೇಂದ್ರ ಮೋದಿ ಫೆ.೨೭ರಂದು ವಿಮಾನ ನಿಲ್ದಾಣ ಸೇರಿದಂತೆ ಜಿಲ್ಲೆಯ ಒಟ್ಟು ೭,೫೦೦ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡಿರುವ ಕಾಮಗಾರಿಗಳ ಲೋಕಾರ್ಪಣೆ ಮಾಡಲಿದ್ದಾರೆ ಎಂದುದ್ರ ತಿಳಿಸಿದರು. ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ, ವಿವಿಧ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ, ಶಿವಮೊಗ್ಗ-ಶಿಕಾರಿಪುರ-ರಾಣೆ ಬೆನ್ನೂರು ರೈಲ್ವೆ ಮಾರ್ಗ ಕಾಮಗಾರಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕನಿಷ್ಠ ಮೂರು ರೈಲ್ವೆ ಮೇಲ್ವೇತುವೆ ಉದ್ಘಾಟಿಸುವರು. ಒಂದು ಸಾವಿರ ಕೋಟಿ ರೂ. ಮೊತ್ತದ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆ ಯನ್ನು ಲೋಕಾರ್ಪಣೆಗೊಳಿಸುವರು ಎಂದು ಮಾಹಿತಿ ನೀಡಿದರು.
ಇಚ್ಛಾಶಕ್ತಿ ಇದ್ದರೆ ಏನನ್ನೂ ಸಾಧಿಸಬಹುದು ಎಂಬುದಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಸಾಕ್ಷಿಯಾಗಿದೆ. ಒಂದೇ ಸರ್ಕಾರದ ಅವಧಿಯಲ್ಲಿ ಕಾಮಗಾರಿಗೆ ಮರುಚಾಲನೆ ನೀಡಿ ಅದನ್ನು ಪೂರ್ಣಗೊಳಿಸಿರುವುದು ಸಣ್ಣ ಸಾಧನೆಯೇನಲ್ಲ. ಮಾಜಿ ಸಿಎಂ ಯಡಿಯೂರಪ್ಪ ಅವರ ದೂರದೃಷ್ಟಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ಸಹಕಾರವೇ ಇದಕ್ಕೆ ಕಾರಣ ಎಂದು ಹೇಳಿದರು.


ಡಿಜಿಸಿಎ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಅಧಿಕಾರಿಗಳು ಕಾಮಗಾರಿ ಪರಿಶೀಲನೆ ನಡೆಸಿ ಎಲ್ಲವೂ ಸರಿಯಿದ್ದರೆ ಮಾತ್ರ ವಿಮಾನ ಹಾರಾಟಕ್ಕೆ ಅನುಮತಿ ನೀಡುತ್ತಾರೆ. ಸಣ್ಣ ನ್ಯೂನತೆಯಿದ್ದರೂ ಅನುಮತಿ ಸಿಗುವುದಿಲ್ಲ. ಹೀಗಾಗಿ ಅನೌಪಚಾರಿಕವಾಗಿ ಒಮ್ಮೆ ಅಧಿಕಾರಿಗಳ ತಂಡವನ್ನು ಕರೆಯಿಸಿಕೊಂಡು ಅವರಿಂದ ಮಾರ್ಗದರ್ಶನ ಪಡೆದಿದ್ದೇವೆ.ತಾಂತ್ರಿಕವಾಗಿ ನಮಗೆ ಸಲಹೆ ನೀಡಲು ಬ್ರಿಗೇಡಿಯರ್ ಪೂರ್ವಿಮರ್ ಎಂಬುವವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಎಂಎಲ್‌ಸಿ ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಡಿಸಿ ಡಾ.ಆರ್.ಸೆಲ್ವಮಣಿ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಪ್ರಮುಖರಾದ ಪವಿತ್ರಾ ರಾಮಯ್ಯ, ಎಸ್.ದತ್ತಾತ್ರಿ, ಜ್ಯೋತಿಪ್ರಕಾಶ್ ಇತರರಿದ್ದರು.

ವಿಮಾನ ನಿಲ್ದಾಣದಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕುವುದೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಿ, ಈಗಾಗಲೇ ಭದ್ರತಾ ಸಿಬ್ಬಂದಿ ನೇಮಕಾತಿ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಈಗಾಗಲೇ ನೇಮಕಾತಿ ಮಾಡಿದೆ. ವಿಮಾನ ನಿಲ್ದಾಣ ಪ್ರಾಧಿಕಾರದ ವತಿಯಿಂದ ಕೂಡ ಸಿಬ್ಬಂದಿಗಳ ನೇಮಕಾತಿ ಆಗಿ ಈಗಾಗಲೇ ಅವರು ತರಬೇತಿ ಪಡೆಯುತ್ತಿದ್ದಾರೆ. ಉಳಿದಂತೆ ಹೌಸ್ ಕೀಪಿಂಗ್ ಸಿಬ್ಬಂದಿಗಳು ಸಣ್ಣ ಪ್ರಮಾಣದಲ್ಲಿ ನೇಮಕವಾಗಬೇಕು. ಆದರೆ ಈ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಇನ್ನೂ ಹೊರಡಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!