ಹುಣಸೋಡು ಸ್ಫೋಟದಿಂದ ಹಾನಿಗೊಳಗಾಗಿರುವ ಮನೆಗಳ ಸಂತ್ರಸ್ತರಿಗೆ ಕೂಡಲೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ನವಕರ್ನಾಟಕ ನಿರ್ಮಾಣ ವೇದಿಕೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆದು ಜಿಲ್ಲಾಡಳಿತದ ಮೂಲಕ ಶಾಸಕ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.


ನಗರದ ಹೊರವಲಯದ ಹುಣಸೋಡು ಬಳಿ ೨೦೨೧ರ ಜ.೨೧ರ ರಾತ್ರಿ ಕಲ್ಲುಕ್ವಾರೆಗಳಿಗೆ ಉಪಯೋಗಿಸಲು ಅಕ್ರಮವಾಗಿ ತಂದಿದ್ದ ಜಿಲೆಟಿನ್ ಕಡ್ಡಿಗಳು ಮತ್ತು ಸಿಡಿಮದ್ದು ಸ್ಫೋಟಗೊಂಡು ಜಿಲ್ಲಾದ್ಯಂತ ಭೂಕಂಪನದ ಅನುಭವವಾಗಿತ್ತು. ಸ್ಫೋಟಗೊಂಡ ಸುತ್ತಮುತ್ತಲಿನ ಗ್ರಾಮಗಳ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕೆಲವು ಮನೆಗಳ ಛಾವಣಿ ಹಾಳಾಗಿದ್ದು, ಮತ್ತೆ ಕೆಲವು ಮನೆಗಳ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿದ್ದವು. ಇದಕ್ಕೆ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ಲಕ್ಷ್ಯದಿಂದ ತಮ್ಮದಲ್ಲದ ತಪ್ಪಿನಿಂದ ನೂರಾರು ಗ್ರಾಮಸ್ಥರು ಲಕ್ಷಾಂತರ ರೂ. ನಷ್ಟ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.


ಈ ಘಟನೆಯಿಂದ ಹಾನಿಗೊಳಗಾದ ಸುಮಾರು ೮೫೦ ಸಂತ್ರಸ್ತರು ಪರಿಹಾರ ನೀಡಲು ಕೋರಿ ಅರ್ಜಿ ಸಲ್ಲಿಸಿದ್ದು, ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದಿಂದ ಪ್ರತಿ ಮನೆ ಶೇ.೧೦ರಷ್ಟು ಹಾನಿಗೊಳಗಾಗಿದೆ ಎಂದು ವರದಿ ನೀಡಲಾಗಿತ್ತು. ಆದರೆ ಘಟನೆ ನಡೆದು ೨ ವರ್ಷ ಕಳೆದರೂ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ ಎಂದು ಆರೋಪಿಸಲಾಗಿದೆ.


ಘಟನೆಯಲ್ಲಿ ಕಾಣೆಯಾದವರ ಬಗ್ಗೆ ಇಲ್ಲಿಯವರೆಗೂ ಯಾವುದೇ ಮಾಹಿತಿ ನೀಡಿರುವುದಿಲ್ಲ. ಆದ್ದರಿಂದ ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ಇಂತಹ ದುರ್ಘಟನೆಗೆ ಕಾರಣವಾದ ಗ್ರಾಮಗಳ ಸುತ್ತಮುತ್ತ ಇರುವ ಕ್ವಾರೆ, ಕ್ರಶರ್‌ಗಳನ್ನು ಮುಚ್ಚಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ವೇದಿಕೆ ರಾಜ್ಯಾಧ್ಯಕ್ಷ ಗೋ. ರಮೇಶ್ ಗೌಡ, ಪ್ರಮುಖರಾದ ಸಂತೋಷ್, ನಿಂಗರಾಜ್, ದೇವೇಂದ್ರಪ್ಪ, ನಯನ, ನಾಗರಾಜ್, ಪುಷ್ಪ, ರಾಜು ಗುಜ್ಜರ್, ಹೆಚ್.ಲೋಕೇಶ್, ಆಸೀಫ್, ಫಯಾಜ್ ಇನ್ನಿತರರು ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!