ಶಿವಮೊಗ್ಗ: ನಗರದ ವಿವಿಧ ಕೈಗಾರಿಕಾ ವಸಹಾತು ಮತ್ತು ನಗರದ ವಾಣಿಜ್ಯೋದ್ಯಮ ಸ್ಥಳಗಳಲ್ಲಿ ಟ್ರಕ್‌ಗಳು ಓಡಾಡಲು ಟ್ರಾಫಿಕ್ ನಿಯಮದ ವ್ಯವಸ್ಥೆಯನ್ನು ಸುಗಮಗೊಳಿಸಿ ಅನುಮತಿ ನೀಡುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ವಿವಿಧ ಸಂಘಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ಜಿಲ್ಲಾಡಳಿತದಿಂದ ಶಿವಮೊಗ್ಗ ನಗರದ ವಿವಿಧ ರಸ್ತೆಗಳಲ್ಲಿ ಸರಳ ಸಂಚಾರಕ್ಕೆ ಟ್ರಾಫಿಕ್ ನಿಯಮಾವಳಿಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ಕೆಲ ಮುಖ್ಯ ರಸ್ತೆಗಳಲ್ಲಿ ಬೆಳಗ್ಗೆ 8.00 ರಿಂದ ರಾತ್ರಿ 8.00ರವರೆಗೆ ಯಾವುದೇ ಸರಕು ಸಾಗಾಣಿಕ ವಾಹನಗಳು ಓಡಾಡದಂತೆ ನಿಬಂಧಿಸಲಾಗಿದೆ. ಸರಕು ಸಾಗಾಣಿಕೆ ಸಂಚಾರದ ವಾಹನಗಳನ್ನು ನಿರ್ಬಂಧದಿಂದ ವರ್ತಕರು ದಿನನಿತ್ಯದ ವ್ಯಾಪಾರ ನಡೆಸಲು ಅನಾನುಕೂಲವಾಗುತ್ತಿದೆ ಎಂದರು.


ಸಾಗರ ರಸ್ತೆ ಆರ್.ಎಂ.ಸಿ ಪಕ್ಕದಲ್ಲಿರುವ ಕೈಗಾರಿಕಾ ವಸಹಾತುವಿಗೆ ಲಾರಿಗಳ ಆಗಮನ ಮತ್ತು ನಿರ್ಗಮನ ನಿಷೇಧಿಸಲಾಗಿದೆ. ಶಿವಮೊಗ್ಗ ನಗರದ ಒಳಗೆ ಬರುವ ಸಾಗರ ರಸ್ತೆಯಲ್ಲಿ “ಯೂ” ಟನ್ ಇರುವ ಚರ್ಚ್ವರೆಗೂ ಲಾರಿಗಳ ನಿಷೇಧಿಸಿರುವ ಆಜ್ಞೆಯಿಂದ ಕೈಗಾರಿಕೋದ್ಯಮಿಗಳಿಗೆ ಉತ್ಪಾದನೆಗೆ, ಕಾರ್ಮಿಕರಿಗೆ ಅನಾನುಕೂಲವಾಗಿ ನಷ್ಟ ಅನುಭವಿಸುವಂತಾಗಿದೆ ಎಂದರು.


ಕೈಗಾರಿಕೆಗಳು ನಡೆಯಲು ಮತ್ತು ಅಭಿವೃದ್ಧಿಪಡಿಸಲು ಸರಕುಗಳ ಪೂರೈಕೆಗೆ ಸರಕು ವಾಹನಗಳು ಪೂರಕ
ಘಟಕಗಳಿಗೆ ಸಾಗಿಸುವುದು ಅವಶ್ಯವಾಗಿರುತ್ತದೆ. ಕೈಗಾರಿಕೆಯಲ್ಲಿ ತಯಾರಾದ ಸಾಮಗ್ರಿಗಳನ್ನು ಹೊರಗೆ ಕಳಿಸುವುದು ಅನಿವಾರ್ಯವಾಗಿರುತ್ತದೆ. ಆದ್ದರಿಂದ ವ್ಯಾಪಾರೋದ್ಯಮ ಸುಗಮವಾಗಿ ಸಾಗಲು ಕ್ರಮ ವಹಿಸುವಂತೆ ಮನವಿ ಮಾಡಿದರು.
ಶಿವಮೊಗ್ಗ ನಗರದ ವಿವಿಧ ವಾಣಿಜ್ಯೋದ್ಯಮ ಸ್ಥಳಗಳಲ್ಲಿ ಪ್ಲೆಕ್ಸ್ ಗಳು, ಬ್ಯಾನರ್ ಗಳನ್ನು ಕಟ್ಟುತ್ತಿರುವುದರಿಂದ ಅಡಚಣೆ ಆಗುತ್ತಿದ್ದು, ಕಟ್ಟುನಿಟ್ಟಿನ ನಿಯಮಾಳಿಗಳನ್ನು ಆದೇಶಿಸುವಂತೆ ಮನವಿ ಮಾಡಿದರು.
ಅಗ್ನಿಶಾಮಕ ದಳ ಕಚೇರಿಯಲ್ಲಿ ಅಗತ್ಯ ಆಧುನಿಕ ಸಾಮಾಗ್ರಿಗಳು ಹಾಗೂ ಅಗತ್ಯ ಸೌಕರ್ಯಗಳು ಇರುವಂತೆ ಕ್ರಮ ವಹಿಸಬೇಕು. ತುರ್ತು ಸಂದರ್ಭದಲ್ಲಿ ಮೂಲಸೌಕರ್ಯಗಳಿಲ್ಲದೇ ಅನಾಹುತಗಳಲ್ಲಿ ಸೂಕ್ತ ನೆರವು ನೀಡಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಗಮನ ಹರಿಸಬೇಕು ಎಂದು ಮನವಿ ಮಾಡಿದರು.


ಜಿಲ್ಲಾಡಳಿತದ ವತಿಯಿಂದ ಟ್ರಕ್ ಟರ್ಮಿನಲ್‌ಗೆ ಸ್ಥಳ ಅವಕಾಶ ಕಲ್ಪಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಯಶಸ್ವಿಯಾಗಿ ಹಿಂದೆ ನಡೆಯುತ್ತಿದ್ದ ಸಹ್ಯಾದ್ರಿ ಉತ್ಸವವನ್ನು ಶಿವಮೊಗ್ಗದಲ್ಲಿ ಮತ್ತೆ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಗಮನಕ್ಕೆ ತರಲಾಯಿತು.
ಹಾರ್ಡವೇರ್ ಅಸೋಸಿಯೇಷನ್, ದಿನಸಿ ವರ್ತಕರ ಸಂಘ, ಜಿಲ್ಲಾ ವಿತರಕರ ಸಂಘ, ಔಷಧಿ ವ್ಯಾಪಾರಿಗಳ ಸಂಘ, ಜವಳಿ ವರ್ತಕರ ಸಂಘ, ಗಾಂಧಿಬಜಾರ್ ವರ್ತಕರ ಸಂಘ, ಸಾಗರ ರಸ್ತೆ ಕೈಗಾರಿಕಾ ವಸಾಹತು, ಎಪಿಎಂಸಿ ವರ್ತಕರು ಹಾಗೂ ವಿವಿಧ ಕೈಗಾರಿಕಾ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.


ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ವಸಂತ ಹೋಬಳಿದಾರ್, ಅಶ್ವತ್ಥ ನಾರಾಯಣ ಶೆಟ್ಟಿ, ಜೆ.ಆರ್.ವಾಸುದೇವ್, ಜಿ.ವಿಜಯಕುಮಾರ್, ಜಗದೀಶ ಮಾತನವರ್, ಪ್ರದೀಪ್ ಎಲಿ, ಎಸ್.ಎಸ್.ಉದಯ್‌ಕುಮಾರ್, ಬಿ.ಗೋಪಿನಾಥ್, ಹಾಲಸ್ವಾಮಿ, ಶಿವರಾಜ್ ಉಡುಗಣಿ, ವೆಂಕಟೇಶಮೂರ್ತಿ ಮತ್ತಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!