ದುರ್ಗಿಗುಡಿ ಕ್ರಿಕೆಟ್ ಸಂಸ್ಥೆ ರಾಜ್ಯದಲ್ಲೇ ಹೆಸರು ಮಾಡಿದ ಸಂಸ್ಥೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಹೇಳಿದ್ದಾರೆ.


ಅವರು ಇಂದು ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ದುರ್ಗಿಗುಡಿ ಕ್ರಿಕೆಟ್ ಸಂಸ್ಥೆಯ ಅಮೃತ ಮಹೋತ್ಸವದ ಅಂಗವಾಗಿ ಶಿವಮೊಗ್ಗ, ಚಿಕ್ಕಮಗಳೂರು,ಹಾಸನ ಜಿಲ್ಲೆಯ ಆಹ್ವಾನಿತ ಪ್ರತಿಷ್ಟಿತ ತಂಡಗಳ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
೧೯೪೫ರಲ್ಲಿ ದುರ್ಗಿಗುಡಿ ಕ್ರಿಕೆಟ್ ಸಂಸ್ಥೆ ಜನ್ಮತಾಳಿತು. ಕ್ರಿಕೆಟ್ ಅಂದರೆ ಡಿಸಿಎ(ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್) ಎಂಬ ದಿನವಿತ್ತು. ಆಗಿನ ಸಂಸ್ಥೆಯ ಸಂಸ್ಥಾಪಕರಾದ ಪುಟ್ಟಪ್ಪ ಮತ್ತು ನಾರಾಯಣ್ ಮೊದಲಾದ ಹಿರಿಯರು ನೆಹರೂ ಕ್ರೀಡಾಂಗಣದಲ್ಲಿ ಈ ಸಂಸ್ಥೆ ಹುಟ್ಟು ಹಾಕಿದರು. ಆ ಕ್ರೀಡಾಂಗಣ ಕೂಡ ಬೇರೆಯವರ ಪಾಲಾಗುವ ಸಂದರ್ಭ ಬಂದಿತ್ತು. ಆಗ ಈ ಮಹಾತ್ಮರು ಹೋರಾಟಮಾಡಿ ಕ್ರೀಡಾಂಗಣವನ್ನು ಉಳಿಸಿಕೊಂಡರು.


ಕ್ರಿಕೆಟ್ ಈಗ ಶ್ರೀಮಂತ ಕ್ರೀಡೆಯಾಗಿದೆ. ಭಾರತದಲ್ಲಿ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕ್ರಿಕೆಟ್ ಬೆಳೆಯಲು ದುರ್ಗಿಗುಡಿ ಕ್ರಿಕೆಟ್ ಸಂಸ್ಥೆಯಂತಹ ಸಣ್ಣ-ಪುಟ್ಟ ಸಂಸ್ಥೆಗಳ ಪಾಲು ಮತ್ತು ಪರಿಶ್ರಮವಿದೆ. ಇಂದು ಕ್ರಿಕೆಟ್ ಆರ್ಥಿಕ ಸದೃಢತೆಯನ್ನು ಕಂಡಿದೆ. ಒಂದು ಕಾಲದಲ್ಲಿ ಆಟಗಾರರಿಗೆ ಮಜ್ಜಿಗೆ ಕೊಡಲು ಕೂಡ ಹಣವಿರಲಿಲ್ಲ. ಒಂದು ಬಾಲ್ ತರಲು ೩ ದಿನಗಳ ಸತತ ಪ್ರಯತ್ನ ಮಾಡಬೇಕಿತ್ತು. ಈಗ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಬಂದ ಮೇಲೆ ಹಬ್ಬದ ವಾತಾವರಣವಿರುತ್ತದೆ. ಮುಂಚೆ ಮೊದಲು ನಾವೆಲ್ಲ ಅದನ್ನು ವಿರೋಧಿಸಿದ್ದೆವು ಎಂದರು.


ಈ ಸಂದರ್ಭದಲ್ಲಿ ಕೆಎಸ್‌ಸಿಎ ಅಜೀವ ಸದಸ್ಯರಾದ ಮಾಧವ್‌ರಾವ್ ಮತ್ತು ಡಿಸಿಎ ಹಿರಿಯ ಸದಸ್ಯರಾದ ಡಿ.ಹೆಚ್.ಶಂಕರಮೂರ್ತಿ ಅವರನ್ನು ಸನ್ಮಾನಿಸಲಾಯಿತು.


ಈ ಪಂದ್ಯಾವಳಿಯಲ್ಲಿ ೧೯ ವರ್ಷದ ಒಳಗಿನ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ಚಿಕ್ಕಮಗಳೂರು ತಂಡದ ಅನಿಷ್‌ಗೌತಮ್, ರಣಜಿಯಲ್ಲಿ ಆಟವಾಡಿದ ಶಿವಮೊಗ್ಗದ ಎಸ್.ಎಲ್.ಅಕ್ಷಯ್ ಮತ್ತು ಕೆಪಿಎಲ್ ಪಂದ್ಯಾವಳಿಯಲ್ಲಿ ಆಡಿದ ಶಿವಮೊಗ್ಗದ ನಿದೀಶ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ವಲಯ ಸಂಚಾಲಕರಾದ ಹೆಚ್.ಎಸ್.ಸದಾನಂದ, ಅಬ್ದುಲ್ ಕಲಾಂ, ನಾಗರಾಜ್, ಕಟ್ಟೆ ಶ್ರೀನಾಥ್, ಬಿ.ಜಿ.ರಾಘವೇಂದ್ರ, ಅಮೃತ್ ಹಾಗೂ ದುರ್ಗಿಗುಡಿ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!