ಸಾಗರ : ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಮಲೆನಾಡಿನ ರೈತರ ಪರವಾಗಿ ಯಾವತ್ತೂ ಇರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.


ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ರ ಅಡಿಕೆ ಬೆಳೆಗಾರರ ಸಹಕಾರಿ ಸಂಘಗಳ ಒಕ್ಕೂಟದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು.


ಅಡಿಕೆ ಎಲೆಚುಕ್ಕಿ ರೋಗಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೇಂದ್ರದ ನುರಿತ ವಿಜ್ಞಾನಿಗಳ ತಂಡ ಕಾಸರಗೋಡಿನಿಂದ ಸಂಶೋಧನೆ ಆರಂಭಿಸಿದೆ. ಎಲೆಚುಕ್ಕೆ ರೋಗ ಕಾಣಿಸಿಕೊಂಡ ತೋಟಕ್ಕೆ ವಿಜ್ಞಾನಿಗಳ ತಂಡ ಭೇಟಿ ನೀಡಿ ಸ್ಥಳೀಯ ರೈತರ ಜೊತೆ ಮಾತುಕತೆ ನಡೆಸಲಿದೆ. ಅಡಿಕೆ ಕೊಳೆರೋಗ, ಎಲೆಚುಕ್ಕೆ ರೋಗದಿಂದ ತತ್ತರಿಸಿ ಹೋಗಿರುವ ಅಡಿಕೆ ಬೆಳೆಗಾರರಿಗೆ ಟಾಸ್ಕ್‌ಪೋರ್ಸ್ ಮೂಲಕ ೨.೫೦ ಕೋಟಿ ರೂ. ಬಿಡುಗಡೆ ಮಾಡಿ ಔಷಧಿ ವಿತರಣೆ ಮಾಡುವ ಕೆಲಸ ನಡೆದಿದೆ. ಬೈಂದೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಡಿಕೆ ಎಲೆಚುಕ್ಕಿ ರೋಗಕ್ಕೆ ೧೦ ಕೋಟಿ ರೂ. ಘೋಷಣೆ ಮಾಡಿದ್ದು ಇನ್ನು ಎರಡು ಮೂರು ದಿನದಲ್ಲಿ ಹಣ ಬಿಡುಗಡೆಯಾಗಲಿದೆ. ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.


ಶರಾವತಿ ಮುಳುಗಡೆ ಸಂತ್ರಸ್ತರ ಭೂಹಕ್ಕಿನ ಸಮಸ್ಯೆ ಬಗ್ಗೆ ಗಮನದಲ್ಲಿದೆ. ಈಗಾಗಲೆ ಗೃಹ ಸಚಿವರು, ಶಾಸಕ ಹಾಲಪ್ಪ ನೇತೃತ್ವದಲ್ಲಿ ಅರಣ್ಯ ಅಧಿಕಾರಿಗಳ ಸಭೆ ನಡೆದಿದೆ. ಯಾವುದೇ ಕಾರಣಕ್ಕೂ ಶರಾವತಿ ಮುಳುಗಡೆ ಸಂತ್ರಸ್ತರ ಒಂದಿಂಚು ಜಾಗವನ್ನು ಬಿಟ್ಟುಕೊಡಲು, ಒಕ್ಕಲೆಬ್ಬಿಸಲು ಅವಕಾಶ ನೀಡುವುದಿಲ್ಲ. ನ. ೨೬ರಿಂದ ಲೋಕಸಭಾ ಅಧಿವೇಶನ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ಸಹ ಮಲೆನಾಡು ಸಮಸ್ಯೆ ಕುರಿತು ಗಮನ ಸೆಳೆಯಲಾಗುತ್ತದೆ. ಇಷ್ಟು ವರ್ಷಗಳ ಕಾಲ ಆಡಳಿತ ನಡೆಸಿದವರು ಕೊಡಿಸುತ್ತೇನೆ, ಕೊಡುತ್ತೇನೆ ಎಂದು ಜನರನ್ನು ತೋರಿಸುತ್ತಿದ್ದರು. ಆದರೆ ನಾವು ಶಕ್ತಿಮೀರಿ ಅನುದಾನ ತಂದು ಅಭಿವೃದ್ದಿಪಡಿಸುತ್ತಿದ್ದೇವೆ ಎಂದು ಹೇಳಿದರು.


ಇನ್ನೋರ್ವ ಸನ್ಮಾನಿತರಾದ ಶಾಸಕ ಎಚ್.ಹಾಲಪ್ಪ ಹರತಾಳು ಮಾತನಾಡಿ, ಸಂಸದ ಬಿ.ವೈ.ರಾಘವೇಂದ್ರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಅಡಿಕೆ ಬೆಳೆಗಾರರ, ಶರಾವತಿ ಮುಳುಗಡೆ ಸಂತ್ರಸ್ತರ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಕೇಂದ್ರದಿಂದ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪೂರಕವಾಗಿ ಸ್ಪಂದಿಸುತ್ತಿದ್ದಾರೆ. ಪ್ರಸ್ತುತ ಎಲೆಚುಕ್ಕೆ ರೋಗದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


ಹಿರಿಯ ಸಹಕಾರಿ ಮಂಜಪ್ಪ ಎಚ್.ಎಸ್. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಹೇಶ್ ಹುಲ್ಕುಳಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಪ್ರಮುಖರಾದ ಟಿ.ಡಿ.ಮೇಘರಾಜ್, ಸಿದ್ದಲಿಂಗಪ್ಪ, ಸೂರ್ಯನಾರಾಯಣ ಖಂಡಿಕಾ, ಲೋಕನಾಥ್ ಬಿಳಿಸಿರಿ ಇನ್ನಿತರರು ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ರಾಮಪ್ಪ ಪ್ರಾರ್ಥಿಸಿದರು. ಎನ್.ಜಿ.ರಾಮಚಂದ್ರ ಸ್ವಾಗತಿಸಿದರು. ಕೆ.ಸಿ.ದೇವಪ್ಪ ಪ್ರಾಸ್ತಾವಿಕ ಮಾತನಾಡಿದರು. ಎಂ.ಎಸ್.ನಾಗರಾಜ್ ವಂದಿಸಿದರು. ದಿನೇಶ್ ಬರದವಳ್ಳಿ ನಿರೂಪಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!