ಶಿವಮೊಗ್ಗ,ನ.12: ಮಕ್ಕಳಿಗೆ ಶಿಕ್ಷಣವನ್ನು ನೀಡಿ ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಿ ಎಂದು ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ಅವರು ಇಂದು ಕನಕ ನಗರದ ಶ್ರೀ ಬೀರಲಿಂಗೇಶ್ವರ ಭಕ್ತ ಮಂಡಳಿ ಆಯೋಜಿಸಿದ್ದ 4 ದಿನಗಳ ಬೀರಪ್ಪ ದೇವರ ಭಂಡಾರ ಜಾತ್ರೆ ಕಾರ್ಯಕ್ರಮದ 2ನೇ ದಿನವಾದ ಇಂದು ನೂರಾರು ಜೋಗತಿಯರಿಗೆ ಮಡಲಕ್ಕಿ ತುಂಬುವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು.
ಅಕ್ಷರ ಜ್ಞಾನ ಮುಖ್ಯ ಜೋಗತಿಯರು ಕೂಡ ತಮ್ಮ ಕುಟುಂಬಕ್ಕೆ ಅಕ್ಷರಜ್ಞಾನ ನೀಡಬೇಕು. ಸಮಾಜ ವಿದ್ಯೆಯಿಂದ ವಂಚಿತರಾಗಬಾರದು. ಮೌಢ್ಯಕ್ಕೂ ಬಲಿಯಾಗಬಾರದು. ಬೀರಲಿಂಗೇಶ್ವರ ದೇವರು ದೇವರ ಭಂಡಾರಕ್ಕೆ ಅಪರೂಪದ ಶಕ್ತಿಯಿದೆ. ಸದಾ ಭಂಡಾರವನ್ನು ಧರಿಸಿ ಭಯ ನಿರ್ಮೂಲನೆ ಆಗುತ್ತದೆ. ಭಂಡಾರ ಮತ್ತು ಕಂಬಳಿ ಬೀರೇಶ್ವರನ ಪ್ರತೀಕವಾಗಿದ್ದು, ಸದಾ ನಮ್ಮನ್ನು ರಕ್ಷಿಸುತ್ತದೆ.
ಸಮಾಜ ಯಾವಾಗಲು ಒಗ್ಗಟ್ಟಾಗಿರಬೇಕು. ಸೂರ್ಯ ಹುಟ್ಟುವಾಗ ಮತ್ತು ಮುಳುಗುವಾಗ ಉಂಟಾಗುವ ಬಣ್ಣದಂತೆ ಭಂಡಾರದ ಬಣ್ಣವಾಗಿದ್ದು, ಅದಕ್ಕೆ ಅತ್ಯಂತ ಶಕ್ತಿಯಿದೆ. ಎಂ.ಶ್ರೀಕಾಂತ್ ರವರು ಅವಿರತವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಕುರುಬ ಸಮಾಜದ ಮುಖಂಡ ಎಂ.ಶ್ರೀಕಾಂತ್ ಮಾತನಾಡಿ, ಶ್ರೀ ಬೀರಲಿಂಗೇಶ್ವರ ದೇವಸ್ಥಾನಕ್ಕೆ ಕೇವಲ ಕುರುಬ ಸಮಾಜವಲ್ಲದೆ ಎಲ್ಲಾ ಸಮಾಜದವರು ಕೊಡುಗೆ ನೀಡಿದ್ದಾರೆ. ಜನಪ್ರತಿನಿಧಿಗಳು ಕೂಡ ಅನುದಾನ ನೀಡಿದ್ದಾರೆ. ವಿಶಾಲವಾದ ಜಾಗದಲ್ಲಿ ಸಮಾಜದ ಮತ್ತು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಬೀರಲಿಂಗೇಶ್ವರ ದೇವಸ್ಥಾನ ಸುಂದರವಾಗಿ ಮೂಡಿಬಂದಿದೆ. ಮೊದಲ ಬಾರಿಗೆ ಅದ್ಧೂರಿಯಾಗಿ ದೇವಸ್ಥಾನಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಅದ್ಧೂರಿಯಾಗಿ ಭಂಡಾರ ಜಾತ್ರೆ ಆಯೋಜನೆಯಾಗಿದೆ. ಒಂದು ವರ್ಷಕ್ಕೆ ಸೀಮಿತವಾಗದೆ ಪ್ರತಿ ವರ್ಷ ಈ ವಾರ್ಷಿಕೋತ್ಸವದ ಸಂದರ್ಭದಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಭಂಡಾರ ಜಾತ್ರೆ ಯಶಸ್ವಿಯಾಗಿ ನಡೆಯಲಿ ಮತ್ತು ಈ ಕಾರ್ಯಕ್ರಮಕ್ಕೆ ಹಾಗೂ ದೇವಸ್ಥಾನಕ್ಕೆ ದೇಣಿಗೆ ನೀಡಿದ ಎಲ್ಲಾ ಭಕ್ತರಿಗೂ ನಾನು ವೈಯಕ್ತಿಕವಾಗಿ ಮತ್ತು ಸಮಾಜದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಳೆದ 2 ಬಾರಿ ನಾನು ಚುನಾವಣೆಗೆ ನಿಂತು ಸೋತಿದ್ದೇನೆ. ನನಗೆ ಯಾವುದೇ ಅಧಿಕಾರ ಇಲ್ಲದಿದ್ದರೂ ಕೂಡ ವೈಯಕ್ತಿಕವಾಗಿ ಕಳೆದ 20 ವರ್ಷಗಳಿಂದ ಸಮಾಜಕ್ಕೆ ಮತ್ತು ಎಲ್ಲಾ ಸಾಮಾಜಿಕ ಚಟುವಟಿಕೆಗಳಲ್ಲು ನನ್ನಿಂದ ಆದಷ್ಟು ಯಾವುದೆ ಪ್ರತಿಫಲಾಪೇಕ್ಷೆ ಇಲ್ಲದೆ ಸಹಕರಿಸುತ್ತಾ ಬಂದಿದ್ದೇನೆ. ಇನ್ನು ಮುಂದೆ ಕೂಡ ಗುರುಗಳ ಆಶೀರ್ವಾದದಿಂದ ಯಾವುದೆ ಸೇವೆ ಮಾಡಲು ಸಿದ್ಧನಿದ್ದೇನೆ. ಸಮಾಜ ಕೂಡ ಇಂತಹ ಮಹಾತ್‌ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದರು.
ಇದಕ್ಕು ಮುನ್ನ ನಗರದ ಶಿವಾಲಯದಿಂದ ಕನಕ ರಥಕ್ಕೆ ಸಂಸದ ಬಿ.ವೈ.ರಾಘವೇಂದ್ರ ಮತ್ತು ಸಮಾಜದ ಮುಖಂಡರು ಚಾಲನೆ ನೀಡಿದರು. ವಿವಿಧ ಕಲಾ ತಂಡಗಳೊAದಿಗೆ ಕನಕ ರಥ ಬೀರಲಿಂಗೇಶ್ವರ ದೇವಸ್ಥಾನದ ವರೆಗೆ ಸಂಚರಿಸಿತು. ಬಳಿಕ ಶ್ರೀಗಳಿಂದ ಜೋಗತಿಯರಿಗೆ ಮಡಲಕ್ಕಿ ತುಂಬುವ ಕಾರ್ಯಕ್ರಮ ನಡೆಯಿತು. ಗೊರವಯ್ಯ ತಂಡದಿAದ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಪಾಲಿಕೆ ವಿಪಕ್ಷ ನಾಯಕಿ ರೇಖಾ ರಂಗನಾಥ್, ಪ್ರಮುಖರಾದ ನವುಲೆ ಈಶ್ವರಪ್ಪ, ಸೋಮಸುಂದರ್, ಕುಮಾರ್, ಮಧು, ಮಾಲತೇಶ್, ಪಾಲಾಕ್ಷಿ, ಆನಂದ್ ಮೊದಲಾದವರಿದ್ದರು.