ಶಿವಮೊಗ್ಗ, ಏ.೨೨:
ನಗರದ ವಿನಾಯಕ ನಗದರಲ್ಲಿ ನಿರ್ಮಿಸಿರುವ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಏ.೨೩ರಿಂದ ೨೫ರ ವರೆಗೆ ನಡೆಯಲಿದೆ ಎಂದು ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಆರ್ಯ ವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ ನ ನೇತೃತ್ವದಲ್ಲಿ ದೇವಸ್ಥಾನ ನಿರ್ಮಾಣಗೊಂಡಿದೆ. ವಾಸವಿ ಕನ್ಯಕಾ ಪರಮೇಶ್ವರಿ ದೇವಸ್ಥಾನದ ನೂತನ ಶಿಲಾವಿಗ್ರಹ, ಗೋಪುರ ಕಳಸ ಪ್ರತಿಷ್ಠಾಪನಾ ಮಹೋ ತ್ಸವವು ಏ.೨೫ರಂದು ನಡೆಯಲಿದೆ. ಇದಕ್ಕೆ ಪೂರಕವಾಗಿ ಏ.೨೩ ಮತ್ತು ೨೪ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಶ್ರೀ ಕನ್ಯಕಾ ಪರಮೇಶ್ವರಿ ದೇವಿಯ ಶಿಲಾವಿಗ್ರಹ, ನಗರೇಶ್ವರ, ಕೋದಂಡರಾಮನ ಪರಿವಾರ, ಗಣಪತಿ ಮತ್ತು ನಾಗಸುಬ್ರಹ್ಮಣ್ಯ ದೇವರುಗಳ ಪ್ರತಿಷ್ಠಾಪನಾ, ಕುಂಭಾಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ವಾಸವಿ ಗುರುಪೀಠದ ಪೀಠಾಧೀಶ್ವರ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಪ್ರಧಾನ ಅರ್ಚಕ ನಾಗೇಶಭಟ್ಟರು ಮತ್ತು ಬಾಲಜ್ಯೋತಿಷಿ ಶ್ಯಾಮಶಂಕರ ಭಟ್ ಅವರಿಂದ ನೆರವೇರಲಿದೆ ಎಂದರು.
ಏ.೨೨ರಂದು ಸಂಜೆ ೫.೩೦ಕ್ಕೆ ಎಲ್ಲ ದೇವರ ವಿಗ್ರಹಗ ಳನ್ನು ಬೈಕ್ ರ್ಯಾಲಿ ಮತ್ತು ೪ ಚಕ್ರದ ವಾಹನಗಳ ಮೂಲಕ ಮೆರವಣಿಗೆಯಲ್ಲಿ ದೇವಾಲಯದ ಆವರಣಕ್ಕೆ ಬರಮಾಡಿ ಕೊಳ್ಳಲಾಗುವುದು. ಬೈಕ್ ರ್ಯಾಲಿಯು ಮಾಚೇನಹಳ್ಳಿಯ ನಿರ್ಮಿತಿ ಕೇಂದ್ರದಿಂದ ಹೊರಟು ದೇವಾಲಯದ ಆವರಣ ತಲುಪಲಿದೆ. ೨೩ರಂದು ಧಾರ್ಮಿಕ ಕಾರ್ಯಕ್ರಮಗಳು ಮುಂದುವರೆಯಲಿವೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪ್ರತಿಷ್ಠಾಪನಾ ಮಹೋತ್ಸವ ಏ.೨೫ರಂದು ಸಂಜೆ ೬ ಗಂಟೆಗೆ ನಡೆಯಲಿದ್ದು, ವಾಸವಿಪೀಠದ ಪೀಠಾಧೀಶ್ವರ ಶ್ರೀ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ವಿಧಾನ ಪರಿಷತ್ ಸಭಾಪತಿ ಡಿ.ಎಸ್. ಶಂಕರಮೂರ್ತಿ, ಶಾಸಕರುಗಳಾದ ಎಸ್. ರುದ್ರೇಗೌಡ, ಆಯನೂರು ಮಂಜುನಾಥ್, ಡಿ.ಎಸ್. ಅರುಣ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮೇಯರ್ ಸುನಿತಾ ಅಣ್ಣಪ್ಪ, ಸೂಡಾ ಅಧ್ಯಕ್ಷ ನಾಗ ರಾಜ್, ಪಾಲಿಕೆ ಸದಸ್ಯೆ ಆರತಿ ಪ್ರಕಾಶ್, ಆರ್ಯವೈಶ್ಯ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್ ಮುಂತಾದವರು ಆಗಮಿಸಲಿದ್ದಾರೆ ಎಂದರು.
ದೇವಾಲಯದ ಲೋಕಾರ್ಪಣೆ ಸಮಾರಂಭ ಮತ್ತು ಎಲ್ಲ ಧಾರ್ಮಿಕ ಕಾರ್ಯಗಳಲ್ಲಿ ಆರ್ಯವೈಶ್ಯ ಸಮಾಜದ ಎಲ್ಲ ಬಂಧುಗಳೂ ಆಗಮಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ.ಆರ್. ಅಶ್ವತ್ಥ ನಾರಾಯಣಶೆಟ್ಟಿ, ಎಸ್.ವಿ. ನಾಗೇಂದ್ರ, ಡಿ.ಎಲ್. ಮಂಜುನಾಥ್, ವೈ.ಗೋಪಾಲಕೃಷ್ಣ ಗುಪ್ತ, ಡಿ.ಎಸ್. ನಟರಾಜ್, ಎಸ್.ಎನ್.ಶ್ರೀನಾಗ್, ಕೆ.ಹೆಚ್. ಜಗನ್ನಾಥ್, ಬಿ. ಮಂಜುನಾಥ್, ಶ್ರೀನಿವಾಸ್ ಇದ್ದರು.