ಶಿವಮೊಗ್ಗ: ಜನಪರ ಚಳವಳಿ, ಸಂಘಟನೆ ಮತ್ತು ವ್ಯಕ್ತಿಗಳ ವೇದಿಕೆ ವತಿಯಿಂದ ಮಾ. 27 ರಂದು ಕರ್ನಾಟಕ ಸಂಘದಲ್ಲಿ ಧರ್ಮ ಸಮನ್ವಯ ಮತ್ತು ಕುವೆಂಪು ವಿಚಾರಧಾರೆ ಅಡಿಯಲ್ಲಿ ವಿದ್ಯಾರ್ಥಿ ಯುವ ಜನರೊಡನೆ ಸಂವಾದ ಹಾಗೂ ಚಿಂತನಾ –ಮಂಥನ ಗೋಷ್ಠಿ ಹಾಗೂ ‘ಧರ್ಮ ಸಮನ್ವಯ ಮತ್ತು ಕುವೆಂಪು ವಿಚಾರಧಾರೆ’ ಕಿರುಹೊತ್ತಿಗೆ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಪ್ರಮುಖ ಪ್ರೊ. ರಾಚಪ್ಪ ಹೇಳಿದರು.
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾ. 27 ರಂದು ಬೆಳಗ್ಗೆ 10.30 ಕ್ಕೆ ಕಾರ್ಯಕ್ರಮವನ್ನು ಮೀನಾಕ್ಷಮ್ಮ ಮತ್ತು ಜಬೀವುಲ್ಲಾ ಉದ್ಘಾಟಿಸಲಿದ್ದಾರೆ. ಪ್ರೊ. ರಾಜರಾಂ ತೋಳ್ಪಾಡಿ ಹಾಗೂ ಪ್ರೊ. ರಾಚಪ್ಪ ವಿಚಾರ ಮಂಡನೆ ಮಾಡಲಿದ್ದಾರೆ. ಪ್ರೊ. ಪ್ರಕಾಶ್ ಕಮ್ಮರಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಎರಡು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಮೊದಲ ಗೋಷ್ಠಿ ಬೆಳಗ್ಗೆ 11.30 ರಿಂದ ಆರಂಭವಾಗಲಿದ್ದು, ವಿದ್ಯಾರ್ಥಿಗಳ ಮನದ ಮಾತು ಕುರಿತು ಲೇಖಕಿ ಭಾನು ಮುಷ್ತಾಕ್ ಮಾತನಾಡುವರು. ಶಶಿ ಮೋಹನ್, ಬಿ. ಗೋಪಾಲ್ ಮತ್ತು ಜಿ.ಎನ್. ನಾಗರಾಜ್ ಗೋಷ್ಠಿಯಲ್ಲಿ ಸಮನ್ವಯ ನುಡಿಗಳನ್ನಾಡುವರು. ವಿದ್ಯಾರ್ಥಿಗಳು ಸಹ ವಿಷಯ ಮಂಡನೆ ಮಾಡಲಿದ್ದಾರೆ ಎಂದರು.
ಮಧ್ಯಾಹ್ನ 2.30 ರಿಂದ ಎರಡನೇ ಗೋಷ್ಠಿ ಆರಂಭವಾಗಲಿದ್ದು, ರೈತ ನಾಯಕ ಕೆ.ಟಿ. ಗಂಗಾಧರ್ ಧರ್ಮ ಸಮನ್ವಯದ ಮುಂದಿನ ನಡೆ ಮಂಡನೆ ಕುರಿತು ಮಾತನಾಡುವರು. ಜಿ.ಎಲ್. ಜನಾರ್ಧನ್ ಉಪಸ್ಥಿತರಿರುವರು ಎಂದು ತಿಳಿಸಿದರು
.ವಕೀಲ ಕೆ.ಪಿ. ಶ್ರೀಪಾಲ್ ಮಾತನಾಡಿ, ಇಂದು ಸೌಹಾರ್ದಕ್ಕೆ ಧಕ್ಕೆ ಉಂಟಾಗುವಂತಹ ವಿಷಮ ಪರಿಸ್ಥಿತಿ ಇದೆ. ಸಮಾಜದಲ್ಲಿ ಧರ್ಮ, ಧರ್ಮಗಳ ನಡುವೆ ಶಾಂತಿ ಕಾಪಾಡಲು, ಸಹಬಾಳ್ವೆಯ ಆಶಯದೊಂದಿಗೆ ಮುಖ್ಯವಾಗಿ ವಿದ್ಯಾರ್ಥಿಗಳಿಗಾಗಿ ಈ ವಿಚಾರ ಗೋಷ್ಠಿ ಆಯೋಜಿಸಲಾಗಿದೆ. ನಗರದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮನಿಸುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಟಿ. ಗಂಗಾಧರ್, ಜಿ.ಡಿ. ಮಂಜುನಾಥ್, ಗುರುಮೂರ್ತಿ, ಹಾಲೇಶಪ್ಪ, ಜನಾರ್ಧನ್, ದೇವಕುಮಾರ್, ನಟರಾಜ್, ಚನ್ನವೀರಪ್ಪ ಗಾಮನಗಟ್ಟಿ ಮೊದಲಾದವರಿದ್ದರು.