ಶಿವಮೊಗ್ಗ: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಶಿವಮೊಗ್ಗದ ವತಿಯಿಂದ ‘ಜನರನ್ನು ಉಳಿಸಿ ದೇಶವನ್ನು ಉಳಿಸಿ’ ಎಂಬ ಘೋಷವಾಕ್ಯದೊಂದಿಗೆ ಮಾ. 28 ರಂದು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮತ್ತು ಮಾ. 29 ರಂದು ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ ಎಂದು ಸಮಿತಿ ಜಿಲ್ಲಾ ಸಂಚಾಲಕ ಎಂ. ನಾರಾಯಣ್ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಖಾಸಗೀಕರಣ ಬೇಡ, ಎಲ್ಲಾ ಶ್ರಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಹಳೆ ರೀತಿಯ ಪಿಂಚಣಿ ಯೋಜನೆ ಜಾರಿಯಾಗಬೇಕು ಎಂಬುದು ಸೇರಿದಂತೆ ಸುಮಾರು 12 ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಮಾ. 28 ರಂದು ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದ. ಮಾ. 29 ರಂದು ಬೆಳಗ್ಗೆ 10.30 ಕ್ಕೆ ನಗರದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಿಐಟಿಯು, ಎಐಸಿಸಿಟಿಯು, ಬಿ.ಎಸ್.ಎನ್.ಎಲ್. ಎಂಪ್ಲಾಯಿಸ್ ಯೂನಿಯನ್, ಗ್ರಾಮ ಪಂಚಾಯಿತಿ ನೌಕರರ ಸಂಘ, ಅಕ್ಷರ ದಾಸೋಹ, ಅಂಗನವಾಡಿ ನೌಕರರ ಸಂಘ ಸೇರಿದಂತೆ ಸುಮಾರು 11 ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ ಎಂದರು.
ಕಾರ್ಮಿಕ ನಾಯಕ ಡಿ.ಸಿ. ಮಾಯಣ್ಣ ಮಾತನಾಡಿ, ಭದ್ರಾವತಿಯಲ್ಲಿ ಎಂಪಿಎಂ ಮತ್ತು ವಿಐಎಸ್ಎಲ್ ಕಾರ್ಖಾನೆಗಳ ಪುನಶ್ಚೇತನಕ್ಕೆ ಒತ್ತಾಯಿಸಲಾಗುವುದು. ಸುಮಾರು 30 ಸಾವಿರ ಜನ ಇಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅನಂತರಾಂ, ಹನುಮಮ್ಮ, ತುಳಸಿಪ್ರಭಾ ಮುಂತಾದವರಿದ್ದರು.