ಹುಡುಕಾಟದ ವರದಿ- 3
ಶಿವಮೊಗ್ಗ, ಜೂ.05:
ಶಿವಮೊಗ್ಗ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಮೇಲೆ ನಿರಂತರವಾಗಿ ಆರೋಪಗಳು ಕೇಳಿ ಬರುತ್ತಲೇ ಇವೆ. ಜೋನ್ ಆದ ನಂತರ ಒಂದಿಷ್ಟು ಬದಲಾವಣೆ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅಲ್ಲಿನ ವಲಯಗಳು ಅಲ್ಲಿನ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರೂ ಸಹ ಪಾಲಿಕೆಯಲ್ಲಿರುವ ಕಂದಾಯ ವಿಭಾಗದ ಕಿರಿಕಿರಿ ಹೆಚ್ಚಾಗಿವೆ ಎಂಬುದು ಸಾರ್ವಜನಿಕರ ಆರೋಪ.
ನಿನ್ನೆ ಸಂಜೆ ಮತ್ತೆ ಶಿವಮೊಗ್ಗ ಲೋಕಾಯುಕ್ತ ಅಧಿಕಾರಿಗಳು ಶಿವಮೊಗ್ಗ ನಗರಪಾಲಿಕೆಗೆ ದಿಢೀರನೆ ಭೇಟಿ ಕೊಟ್ಟಿದ್ದಾರೆ. ಎಲ್ಲರ ಹಾಜರಾತಿ ಹಾಗೂ ಇ ಸ್ವತ್ತಿನ ವಿಷಯಕ್ಕೆ ಸಂಬಂಧಪಟ್ಟಂತೆ ಬಾಕಿ ಉಳಿದಿರುವ ಒಂದಿಷ್ಟು ಪ್ರಕರಣಗಳ ನಕಲು ಪ್ರತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಅಂದರೆ ಇ ಸ್ವತ್ತಿನ ಕಿರಿಕಿರಿ ಲೋಕಾಯುಕ್ತರ ಹಂತಕ್ಕೆ ತಲುಪಿರುವುದು ಹಾಗೂ ಇಲ್ಲಿ ಸಾರ್ವಜನಿಕರು ಅನುಭವಿಸುವ ನೋವಿನ ವಿಷಯಗಳು ಎಷ್ಟು ಎಂಬುದು ಅರ್ಥವಾಗುತ್ತದೆ ಅಲ್ಲವೇ?
ದುರಂತವೆಂದರೆ ಪೌರಾಡಳಿತ ವ್ಯವಸ್ಥೆ ನಡುವೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಯೋಜನೆಗೊಂಡು ಇಲ್ಲಿಗೆ ಬಂದಿದ್ದಾರೆ. ಅವರನ್ನು ಇಲ್ಲಿ ಆರ್. ಓ ಆಗಿ ನೇಮಕ ಮಾಡಲಾಗಿದೆ. ಇದೇ ಪಾಲಿಕೆಯ ಅಧಿಕಾರಿ ಈ ಹುದ್ದೆಯಿಂದ ಕೆಳಗಿಳಿದು ಸುಮ್ಮನೆ ಕುಳಿತಿದ್ದಾರೆ ಎಂಬ ಸತ್ಯದ ಮಾತು ನಗರಪಾಲಿಕೆಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

ಕಳೆದ ವರ್ಷ ಶಿವಮೊಗ್ಗ ನಗರಪಾಲಿಕೆಗೆ ಭದ್ರಾವತಿ ಆರೋಗ್ಯ ಇಲಾಖೆಯಿಂದ ಸತೀಶ್ ಎಂಬುವರು ಇಲ್ಲಿಗೆ ನಿಯೋಜನೆಗೊಂಡಿದ್ದರು. ಅವರನ್ನು ಈಗ ಎರಡು ತಿಂಗಳಿನಿಂದ ಆರ್ ಓ ಆಗಿ ನೇಮಿಸಿದ್ದಾರೆ, ಇದು ಹೇಗೆ ಸಾಧ್ಯ ಎಂಬುದು ಪ್ರಶ್ನೆ?
ಹಿರಿಯ ಅಧಿಕಾರಿಗಳು ಇದರತ್ತ ಗಮನಹರಿಸಿಲ್ಲವೇ ಅಥವಾ ಇದರ ವ್ಯವಸ್ಥೆಯನ್ನು ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ಕೇಳಿ ಬಂದಿದೆ. ವಿಜಯ ಕುಮಾರ್ ಎಂಬುವರು ಇಲ್ಲಿಯವರೆಗೆ ಯಾವ ಕೆಲಸ ಮಾಡುತ್ತಿದ್ದಾರೆ ಎಂಬುದು ಅಲ್ಲಿಯೇ ಗೊತ್ತಿಲ್ಲ. ಇನ್ನು ಜನರು ಸಮಸ್ಯೆಯನ್ನು ಹೇಳುವುದಾದರೂ ಯಾರಿಗೆ ಎಂಬುದು ಗಂಭೀರ ಪ್ರಶ್ನೆ..

ನಗರಪಾಲಿಕೆಯ ಕಂದಾಯ ವಿಭಾಗದ ಉಪಾಯುಕ್ತರಾಗಿದ್ದ ಮಂಜುನಾಥ್ ಎಂಬುವರು ಕಳೆದ ಎರಡು ತಿಂಗಳಿನಿಂದ ರಜೆ ಮೇಲೆ ಹೋಗಿದ್ದಾರೆ. ಜೋನ್ ನಲ್ಲೂ ಆರ್ ಓ ಆಗಿರುವ ಪೂಜಾರಿ ಅವರೇ ಈ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಅವರ ಕೆಲಸ ಜನರೇ ನೋಡಿದ್ದಾರೆ…!, ಕೆಲಸ ಮಾಡುವವರು ಒಂದೆಡೆ ಇದ್ದರೆ ಮತ್ತೊಂದಿಷ್ಟು ಜನ ಕೆಲಸಕ್ಕೆ ಕಾಯುತ್ತಿದ್ದಾರೆ. ಇನ್ನೊಂದಿಷ್ಟು ಜನ ಅನ್ಯ ಕೆಲಸದಲ್ಲಿದ್ದಾರೆ ಎಂಬುದು ಪಾಲಿಕೆಯ ಪಡಸಾಲಿಯಲ್ಲಿನ ಗಂಭೀರ ಆರೋಪ.
ಇತ್ತ ಗಮನಿಸುವವರು ಕೂಡಲೇ ನೋಡಿ ನಿಯೋಜನೆಯಾದ ಅಧಿಕಾರಿಗೆ ಯಾವ ಕೆಲಸ ನೀಡಬೇಕು ಪಾಲಿಕೆಯ ಅಧಿಕಾರಿಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದನ್ನು ಗಮನಿಸುವುದು ಒಳ್ಳೆಯದಲ್ಲವೇ?