ಶಿವಮೊಗ್ಗ : ಪರಿಸರದ ಪೂಜೆ ನಿತ್ಯವೂ ನಡೆಯಬೇಕು ಎಂದು ಉಂಬ್ಳೆಬೈಲಿನ ಸಹಾಯಕ ಸಂರಕ್ಷಣಾಧಿಕಾರಿ (ಆರ್ಎಫ್ಒ) ಸಿಂಧು ಎಂ. ಹೇಳಿದರು.
ಅವರು ಇಂದು ಸಹ್ಯಾದ್ರಿ ಕಾಲೇಜುಗಳ ಕುಟುಂಬದ ಕಲಾ, ವಿಜ್ಞಾನ, ವಾಣಿಜ್ಯ ಮೂರೂ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ವಾಣಿಜ್ಯ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡಗಳನ್ನು ನೆಡುವುದರ ಮೂಲಕ ಆಚರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಇಂದಿನಿಂದಲೇ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕು. ಮುಂದಿನ ಪೀಳಿಗೆಗೂ ಇದು ಉಳಿಯಬೇಕು. ಪ್ರಾಣಿ, ಪಕ್ಷಿಗಳು ನಮ್ಮೊಂದಿಗೆ ಜೀವಿಸುತ್ತವೆ. ಪರಿಸರವನ್ನು ಉಳಿಸುವುದೇ ಒಂದು ಪುಣ್ಯದ ಕೆಲಸ. ಇದೊಂದು ಪೂಜೆಯೂ ಹೌದು. ಸಂಸ್ಕಾರವೂ ಹೌದು. ಈ ಬಾರಿಯ ಧ್ಯೇಯವಾಕ್ಯ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದೇ ಆಗಿದೆ. ಹಸರೀಕರಣಕ್ಕೆ ಆದ್ಯತೆ ಕೊಡುವುದು ನಮ್ಮೆಲ್ಲರ ಕರ್ತವ್ಯ ಕೂಡ. ಅರಣ್ಯ ಇಲಾಖೆ ಕೂಡ ಪರಿಸರವನ್ನು ಕಾಪಾಡುವಲ್ಲಿ ಪ್ರಮುಖಪಾತ್ರ ವಹಿಸುತ್ತದೆ. ಪ್ರಮುಖವಾಗಿ ಶಾಲಾ-ಕಾಲೇಜುಗಳಲ್ಲಿ ಗಿಡ ನೆಡುವುದಕ್ಕೆ ಪ್ರೋತ್ಸಾಹ ಕೂಡ ಕೊಡುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಟಿ. ಅವಿನಾಶ್ ಮಾತನಾಡಿ, ನಮ್ಮ ಮೂರೂ ಕಾಲೇಜುಗಳಲ್ಲಿ ಹಸಿರಿಗೆ ಆದ್ಯತೆ ನೀಡಲಾಗುತ್ತಿದೆ. ಸಹ್ಯಾದ್ರಿ ಕ್ಯಾಂಪಸ್ ಎಂದರೆ ಕೇವಲ ಕಟ್ಟಡಗಳು ಮಾತ್ರವಲ್ಲ, ಇಲ್ಲಿನ ಹಸಿರಿನ ವಾತಾವರಣ ಕೂಡ ಆಗಿದೆ. ನಮ್ಮದು ಪರಿಸರ ಪ್ರೇಮಿ ಕಾಲೇಜಾಗಿದೆ. ಇಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಇಂದೂ ಕೂಡ ಅರಣ್ಯ ಇಲಾಖೆಯ ಸಹಾಯದಿಂದ 300ಕ್ಕೂ ಹೆಚ್ಚು ಸಸಿಗಳನ್ನು ನೆಡುತ್ತಿದ್ದೇವೆ ಎಂದರು.
ಮೂರೂ ಕಾಲೇಜಿನ ಸಹ್ಯಾದ್ರಿ ಎಸ್ಟೇಟ್ ವಿಭಾಗದ ನಿರ್ದೇಶಕ ಡಾ. ಮಂಜುನಾಥ್ ಕೆ.ಎನ್. ಮಾತನಾಡಿ, ಯಾರ ಸಹಾಯವನ್ನು ಇಚ್ಚಿಸದೆ ತಾವೊಬ್ಬರೇ ಮಾಡುವ ಕೆಲಸವೆಂದರೆ ಅದು ಗಿಡ ನೆಡುವುದು ಮಾತ್ರ. ಪರಿಸರವೆಂದರೆ ಜೀವಕೋಶಗಳಿದ್ದಂತೆ ಇದನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದರು.

ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಡಾ. ರಾಜೇಶ್ವರಿ ಎನ್., ಸಂಯೋಜನಾಧಿಕಾರಿ ಶುಭ ಮರವಂತೆ, ಬಯೋಟೆಕ್ಕಿನ ಜಿ.ಎಂ. ರಘು ಸೇರಿದಂತೆ ಹಲವರು ಪರಿಸರ ಜಾಗೃತಿ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಡಾ. ನಾಗಾರ್ಜುನ ಹೆಚ್.ಎಂ., ಡಾ. ಚಂದ್ರಶೇಖರ ಬಿ.ಎಂ., ಡಾ. ಪರಶುರಾಮ್, ಪರಿಸರ ನಾಗರಾಜ್, ಡಾ. ಸರಳ, ಡಾ. ವೀರಶೇಟ್ಟಿ ಜಿ. ರಾಥೋಡ್, ಲವ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.