ಶಿವಮೊಗ್ಗ, ಮಾ.22:
ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಆರಂಭಗೊಂಡಿದ್ದು , ಜಾತ್ರೆ ಹಾಗೂ ಅಮ್ಮನವರ ಪೂಜೆ ಈಗಷ್ಟೇ ಆರಂಭಗೊಂಡಿದೆ. ಅಮ್ಮ ಭಕ್ತರ ದರುಶನಕ್ಕೆ ಸಿದ್ದವಾದ ಇಂದು ಬೆಳಿಗ್ಗೆಯ ಸನ್ನಿವೇಶ ನಯನ ಮನೋಹರವಾಗಿತ್ತು.
ಮಾ.22ರ ಇಂದು ಬೆಳಿಗ್ಗೆ ಏಳುಗಂಟೆಗೆ ಗಾಂಧಿಬಜಾರಿನ ಪೂಜೆ ಆರಂಭಕ್ಕೆ ಅಪಾರ ಭಕ್ತಸಮೋಹ ಕಾಯುತ್ತಿತ್ತು. ಕೆಲವರಂತೂ ಬೆಳಗಿನ ಜಾವದ ನಾಲ್ಕರಿಂದಲೇ ಸಾಲುಗಟ್ಟಿ ಕಾಯುತ್ತಿದ್ದರು.
ಕೋಟೆ ಮಾರಿಕಾಂಬ ಸೇವಾಸಮಿತಿ ಮಹಾನಗರಪಾಲಿಕೆ, ರಕ್ಷಣಾ ಇಲಾಖೆ, ಜಿಲ್ಲಾಡಳಿತದ ನೆರವಿನೊಂದಿಗೆ ಪ್ರತಿ ಭಕ್ತರು ಅತ್ಯಂತ ವ್ಯವಸ್ಥಿತವಾಗಿ ಅಮ್ಮನ ದರುಶನ ಪಡೆಯಲು, ಜಾತ್ರೆಯಲ್ಲಿ ಸಂಚರಿಸಲು, ಅಮ್ಮನವರ ಪ್ರಸಾದ ಪಡೆಯಲು ಸಕಲ ವ್ಯವಸ್ಥೆ ಮಾಡಿದೆ.
ಪ್ರತಿ ಎರಡು ವರುಷಕ್ಕೊಮ್ಮೆ ಊರ ದೇವಿಯ ಈ ಜಾತ್ರೆಯಲ್ಲಿ ಯಾವುದೇ ತೊಂದರೆಯಿಲ್ಲದೇ, ಭಕ್ತರು ಮುಕ್ತವಾಗಿ ಅಮ್ಮನವರಿಗೆ ಹರಕೆ ಒಪ್ಪಿಸಲು ಹಾಗೂ ಅಮ್ಮನ ಸನ್ನಿದಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಈ ಬಾರೀ ಇನ್ನಷ್ಟು ವಿಶೇಷವಾಗಿ ಗಾಂಧಿಬಜಾರ್ ಹಾಗೂ ಕೋಟೆ ಮಾರಿಕಾಂಬ ಸನ್ನಿದಿಯಲ್ಲಿ ಒಳಾಂಗಣದ ರೂಟ್ ಮ್ಯಾಪ್ ಸಿದ್ದಪಡಿಸಿದೆ. ಸಮಿತಿಯೇ ಮುಂದೆ ನಿಂತು ಈ ಜವಾಬ್ಧಾರಿ ಕೆಲಸ ಮಾಡಿದ್ದು ವೃದ್ದರು, ಮಹಿಳೆಯರಿಗೆ ವಿಶೇಷ ಅವಕಾಶ ನೀಡಿದೆ.
ಜಾತ್ರೆಯ ಈ ಐದೂ ದಿನ ವಿವಿಧ ಸಮುದಾಯದ ಪೂಜೆಗಳು ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಅಂತೆಯೇ ಮಾ. 26ರ ಶನಿವಾರ ರಾತ್ರಿ ಎಂಟಕ್ಕೆ ರಾಜಬೀದಿ ಉತ್ಸವದೊಂದಿಗೆ ವನ ಪ್ರವೇಶಿಸಲಿರುವ ಅಮ್ಮನ ಪೂಜೆಯ ಪ್ರತಿಕ್ಷಣದ ಆರಾಧನೆ ನಡೆಯುವವರೆಗೂ ಶಿವಮೊಗ್ಗ ನಗರದ ರೂಟ್ ಮ್ಯಾಪ್ ಬದಲಿಸಲಾಗಿದೆ.