ಸಾಗರ : ಹಿಜಾಬ್ ವಿಷಯ ಕುರಿತು ರಾಜ್ಯ ಉಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ವಿರೋಧಿಸಿ ಮುಸ್ಲಿಂ ಉಲೆಮಾ ಒಕ್ಕೂಟ ರಾಜ್ಯಾದ್ಯಂತ ನೀಡಿರುವ ಬಂದ್ ಕರೆಗೆ ಸಾಗರದ ಚಿಕನ್, ಮಟನ್, ಮೀನು ಮಾರಾಟಗಾರರು ಸ್ಪಂದಿಸಿ ಗುರುವಾರ ತಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ತಾಲ್ಲೂಕು ಕೋಳಿ ಮಾಂಸ ಮಾರಾಟಗಾರರ ಸಂಘದ ಅಧ್ಯಕ್ಷ ಸೈಯದ್ ತಾಹೀರ್, ಹಿಜಾಬ್ ವಿರುದ್ದ ಬಂದಿರುವ ತೀರ್ಪಿನ ವಿರುದ್ದ ಮುಸ್ಲಿಂ ಉಲೆಮಾ ಒಕ್ಕೂಟ ನೀಡಿರುವ ಕರ್ನಾಟಕ ಬಂದ್ ಕರೆಗೆ ಸಾಗರದಲ್ಲಿ ಪೂರಕವಾಗಿ ಸ್ಪಂದನೆ ದೊರೆತಿದೆ. ತಾಲ್ಲೂಕಿನಾದ್ಯಂತ ಮುಸ್ಲೀಂ ಜನಾಂಗದವರು ನಡೆಸುತ್ತಿದ್ದ ವಹಿವಾಟುಗಳನ್ನು ಬಂದ್ ಮಾಡುವ ಮೂಲಕ ನ್ಯಾಯಾಲಯದ ತೀರ್ಪು ಅವೈಜ್ಞಾನಿಕವಾಗಿದ್ದು, ನ್ಯಾಯಾಲಯ ಪುನರ್ ಪರಿಶೀಲಿಸಲಿ ಎಂದು ಒತ್ತಾಯಿಸಿದ್ದೇವೆ ಎಂದರು.
ಈಗಾಗಲೆ ವಿದ್ಯಾರ್ಥಿನಿಯರು ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ವಿದ್ಯಾರ್ಥಿನಿಯರಿಗೆ ನ್ಯಾಯ ಸಿಗುವ ವಿಶ್ವಾಸ ಇದೆ. ಹಿಜಾಬು ಮತ್ತು ಕೇಸರಿ ಶಾಲು ವಿವಾದ ಶಾಲಾ ಹಂತದಲ್ಲಿಯೆ ಬಗೆಹರಿಸಿಕೊಳ್ಳುವ ಸಾಧ್ಯತೆ ಇತ್ತು. ಇದೀಗ ವಿವಾದ ದೊಡ್ಡದಾಗುವಂತೆ ಮಾಡುವಲ್ಲಿ ಸರ್ಕಾರದ ಪಾತ್ರ ಅತಿಮುಖ್ಯವಾಗಿದೆ. ಶಿಕ್ಷಣ ಇಲಾಖೆ ಹೆಣ್ಣುಮಕ್ಕಳ ಶೈಕ್ಷಣಿಕ ಚಟುವಟಿಕೆ ಜೊತೆ ಆಟವಾಡದೆ ಅವರಿಗೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ಪುನರ್ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.