ಶಿವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಸಂದರ್ಭದಲ್ಲಿ ಉಂಟಾಗಿದ್ದ ಉದ್ವಿಗ್ನ ಸ್ಥಿತಿ ತಣ್ಣಗಾಗಿ ಬರುತ್ತಿದೆ ಎನ್ನುವಷ್ಟರಲ್ಲೇ ನಿನ್ನೆ ಸಂಜೆ ಸಂಜೆ ನಾಯಿಯೊಂದಿಗೆ ವಾಕಿಂಗ್‌ಗೆ ತೆರಳಿದ್ದಾಗ ನಗರದ ಗೋಪಾಳದ ಪದ್ಮಾ ಟಾಕೀಸ್ ಬಳಿಯ ನಿವಾಸಿ ವೆಂಕಟೇಶ್ (48) ಅವರ ಮೇಲೆ ನಾಲ್ವರು ದುಷ್ಕರ್ಮಿಗಳು ಕಲ್ಲು, ದೊಣ್ಣೆಗಳಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ವೆಂಕಟೇಶ್ ಅವರ ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದಿದೆ. ಅವರನ್ನು ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದ್ದು, ಹಲ್ಲೆ ಮಾಡಿದ ನಾಲ್ಕೈದು ಆರೋಪಿಗಳ ಪೈಕಿ ಇಬ್ಬರನ್ನು ಗುರುತಿಸಲಾಗಿದೆ. ಶೀಘ್ರವೇ ಬಂಧಿಸಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಸಂಸದ ರಾಘವೇಂದ್ರ, ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಕಾರ್ಪೋರೇಟರ್ ಜ್ಞಾನೇಶ್ವರ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಹಿಂದು ಸಂಘಟನೆ ಪ್ರಮುಖ ದೀನದಯಾಳ್, ಬಿಜೆಪಿ ಮುಖಂಡ ಎಸ್.ದತ್ತಾತ್ರಿ ಸೇರಿದಂತೆ ಹವಲರು ಆಸ್ಪತ್ರೆಗೆ ಭೇಟಿ ಆರೋಗ್ಯ ವಿಚಾರಿಸಿದರು.
ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ, ತುಂಗಾನಗರ ಇನ್‌ಸ್ಪೆಕ್ಟರ್ ಎಂ.ಎಸ್.ದೀಪಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕರ್ಪ್ಯೂ ಮುಂದುವರಿಕೆ ಸಾಧ್ಯತೆ:
ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ, ಕರ್ಪ್ಯೂ ಜಾರಿಯಲ್ಲಿದ್ದು ಶುಕ್ರವಾರ ಬೆಳಗ್ಗೆ 6ಕ್ಕೆ ಅವಧಿ ಮುಕ್ತಾಯವಾಗಬೇಕಿತ್ತು. ಗೋಪಾಳದಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಕಾರಣ ಕರ್ಪ್ಯೂ ಮುಂದುವರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.