ಶಿವಮೊಗ್ಗ: ಕಳೆದ ಐದು ದಿನಗಳಿಂದ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ಈಗ ಸಂಪೂರ್ಣ ಶಾಂತ ಸ್ಥಿತಿಗೆ ಸಾಗಿದೆ. ಜಿಲ್ಲಾಡಳಿತ ಜಾರಿಗೊಳಿಸಿದ್ದ ಕರ್ಫ್ಯೂ ನಾಳೆ ಬೆಳಿಗ್ಗೆ ಅಂತ್ಯಗೊಳ್ಳಲಿದ್ದು, ನಾಳೆಯಿಂದ ಶಾಲಾ ಕಾಲೇಜುಗಳು ಆರಂಭವಾಗಲಿವೆ.
ಕರ್ಫ್ಯೂ ಜಾರಿಗೊಳಿಸಿದ್ದರಿಂದ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ಇಲ್ಲದೇ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರು. ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಹ ಸಲ್ಲಿಸಿದ್ದರು. ಜಿಲ್ಲಾಡಳಿತದ ಈ ನಿರ್ಧಾರದಿಂದ ವ್ಯಾಪಾರಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕರ್ಪ್ಯೂ ನಾಳೆಗೆ ಕೊನೆಗೊಳ್ಳುತ್ತಿದ್ದು, ಇಂದು ಸಹ ಪೊಲೀಸರು ಬಿಗಿ ಬಂದೋಬಸ್ತ್ ಅನ್ನು ಮುಂದುವರೆಸಿದ್ದರು. ವಿವಿಧ ರಸ್ತೆಗಳಲ್ಲಿ ಅವಶ್ಯಕ ಸೇವೆಯ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿತ್ತು. ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಮತ್ತೆ ಕೆಲವು ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಹೊರಗಿನಿಂದ ಬರುವ ವಾಹನಗಳ ತಪಾಸಣೆ ಮಾಡಲಾಗಿತ್ತು. ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಲಾಗಿತ್ತು.
ಎಂದಿನಂತೆ ಹಳೇ ಶಿವಮೊಗ್ಗ ಭಾಗಗಳಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ನಿಲುವು ತಾಳಲಾಗಿತ್ತು. ಆದರೆ, ದುರ್ಗಿಗುಡಿ, ಕುವೆಂಪುರಸ್ತೆ, ಸವಳಂಗ ರಸ್ತೆ, ಆಲುಕೊಳರಸ್ತೆ ಸೇರಿದಂತೆ ಅನೇಕ ಭಾಗಗಳಲ್ಲಿ ಕರ್ಫ್ಯೂ ಬಿಸಿ ಹೆಚ್ಚಾಗಿ ತಟ್ಟಲಿಲ್ಲ.
ಮತ್ತಿಬ್ಬರು ವಶಕ್ಕೆ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಗೆ ಸಂಬಂಧಿಸಿದಂತೆ ಗುರುವಾರ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಕೃತ್ಯಕ್ಕೆ ಬಳಸಿದ್ದ 2 ಕಾರು ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.ಭದ್ರಾವತಿ ಹೊಸಮನೆ ನಿವಾಸಿ ಅಬ್ದುಲ್ ರೋಶನ್ ಯಾನೆ ಆರ್ಸಿ(24) ಹಾಗೂ ಶಿವಮೊಗ್ಗ ವಾದಿ ಎ ಹುದಾ ನಿವಾಸಿ ಜಾಫರ್ ಸಾದಿಕ್ ಯಾನೆ ಭದ್ರುದ್ದೀನ್ ಯಾನೆ ಭದ್ರಿ (55) ಬಂಧಿತ ಆರೋಪಿಗಳಾಗಿದ್ದಾರೆ. ಇದುವರೆಗೆ ಒಟ್ಟು 10 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸ್ ಇಲಾಖೆ ಬಿಗಿ ಕ್ರಮ: ನಗರದಲ್ಲಿ ಉಂಟಾಗಿದ್ದ ಪ್ರಕ್ಷುಬ್ಧ ಸ್ಥಿತಿ ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಪಾತ್ರ ಮಹತ್ವದ್ದಾಗಿದೆ. ಸ್ಥಳೀಯ ಪೊಲೀಸರಲ್ಲದೆ, ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ಅಲ್ಲದೆ, ನಿಗಾ ವಹಿಸಲು ಡ್ರೋಣ್ ಕಣ್ಗಾವಲು ಬಳಲಾಯಿತು. ಹಿರಿಯ ಅಧಿಕಾರಿಗಳು ಇಲ್ಲಿಯೇ ಮೊಕ್ಕಾಂ ಹೂಡಿ ಪರಿಸ್ಥಿತಿ ಹತೋಟಿಗೆ ತಂದು. ಇದರಿಂದಾಗಿ ಕಿಡಿಗೇಡಿಗಳು ದುಷ್ಕೃತ್ಯ ಮುಂದುವರೆಸಲು ಅವಕಾಶವಿಲ್ಲದಂತಾಗಿದೆ.