ಶಿವಮೊಗ್ಗ : ದೇಶದ ಸರ್ವಾಂಗೀಣ ಅಭಿವೃದ್ದಿಗೆ ಪೂರಕವಾದ ಹಾಗೂ ಮುಂದಿನ ೨೫ ವರ್ಷಗಳ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್‌ರವರು ಈ ಬಾರಿಯ ಬಜೆಟ್‌ನ್ನು ಮಂಡಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.


ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅತ್ಯಂತ ದೂರದೃಷ್ಟಿಯುಳ್ಳ ಬಜೆಟ್ ಇದಾಗಿದ್ದು, ರೈತರು, ಮಧ್ಯಮವರ್ಗದವರು ಸೇರಿದಂತೆ ಎಲ್ಲಾ ವಲಯಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದರು.
೭.೫ ಲಕ್ಷ ಕೋಟಿ ಬಂಡವಾಳ ವೆಚ್ಚವನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಲ್ಲದೇ ಹೆಚ್ಚಿನ ಹೊರೆಯನ್ನು ಕೂಡ ವಿಧಿಸಿಲ್ಲ. ಬಂಡವಾಳ ವೆಚ್ಚದಲ್ಲಿ ಶೇ.೩೫.೪ರಷ್ಟು ಏರಿಕೆಯಾಗಿದೆ. ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ತೆ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್ ಮಂಡನೆ ಅತ್ಯಂತ ಸ್ವಾಗತಾರ್ಹವಾಗಿದೆ ಎಂದರು.
ದೇಶದ ಆರ್ಥಿಕ ಬೆಳವಣಿಗೆಯೂ ಶೇಕಡಾ ೯.೨ ಎಂದು ಅಂದಾಜಿಸಲಾಗಿದೆ. ಇದು ಎಲ್ಲಾ ದೊಡ್ಡ ಆರ್ಥಿಕತೆಗಳಲ್ಲ ಅತ್ಯಧಿಕವಾಗಲಿದೆ. ೧೪ ವಲಯಗಳಲ್ಲಿ ಉತ್ಪಾಕತೆ ಆಧಾರಿತ ಪ್ರೋತ್ಸಾಹ ಯೋಜನೆಯಡಿಯಲ್ಲಿ ೬೦ ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಾಗುತ್ತಿದೆ. ಸಹಕಾರ ಕ್ಷೇತ್ರವನ್ನು ಮತ್ತಷ್ಟು ಸಬಲಗೊಳಿಸುವ ನಿಟ್ಟಿನಲ್ಲಿ ಸಹಕಾರ ಸಂಘಗಳ ತೆರಿಗೆಯನ್ನು ಇಳಿಕೆ ಮಾಡಲಾಗಿದೆ.
೧ ಕೋಟಿ ಯಿಂದ ೧೦ ಕೋಟಿ ವರೆಗಿನ ಆದಾಯ ಹೊಂದಿರುವ ಸಹಕಾರ ಸಂಘಗಳ ಮೇಲಿನ ಸಚಾರ್ಜ್‌ನ್ನು ಶೇ. ೧೨ ರಿಂದ ೭ ಇಳಿಕೆ ಮಾಡಲಾಗಿದೆ. ಇದರಿಂದಾಗಿ ಸಹಕಾರ ಸಂಘಗಳ ಸದಸ್ಯರ ಆದಾಯ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದರು.
ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಬಲವನ್ನು ತುಂಬಲಾಗಿದೆ. ಬೆಂಗಳೂರಿನಲ್ಲಿರುವ ನಿಮ್ಹಾನ್ಸ್‌ನ್ನು ನೋಡಲ್ ಕೇಂದ್ರವಾಗಿ ಆಯ್ಕೆ ಮಾಡಲಾಗಿದೆ ಎಂದ ಅವರು, ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಈ ಕೇಂದ್ರ ಹೆಚ್ಚು ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಪ್ರತಿ ಕುಟುಂಬಕ್ಕೆ ಪಕ್ಕಾ ಮನೆ, ನಲ್ಲಿ ನೀರಿನ ವ್ಯವಸ್ಥೆ, ಅನಿಲ ಸಂಪರ್ಕ ಒದಗಿಸುವ ಹರ್-ಗರ್-ನಲ್-ಜಲ್ ಯೋಜನೆಗೆ ೬೦ ಕೋಟಿ ಮೀಸಲಿರಿಸಲಾಗಿದೆ. ಅಲ್ಲದೇ ೩.೮ ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯನ್ನು ರೂಪಿಸಲಾಗಿದೆ.
ಪ್ರಧಾನ ಮಂತ್ರಿ ಆವಾಸ್‌ಯೋಜನೆಯಡಿಯಲ್ಲಿ ೮೦ ಲಕ್ಷ ಮನೆ ಪೂರ್ಣಗೊಳಿಸಲು ೪೮ ಸಾವಿರ ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಲಾಗಿದೆ ಎಂದರು.
ರಕ್ಷಣಾ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆಯನ್ನು ಕಲ್ಪಿಸಲಾಗಿದೆ. ಹಿಂದೆಂದಿಗಿಂತಲೂ ಈ ಬಾರಿ ೫ ಲಕ್ಷದ ೨೫ ಸಾವಿರದ ೧೬೬ ಕೋಟಿ ರೂಪಾಯಿ ಮೀಸಲಿಡಲಾಗಿದೆ. ರಕ್ಷಣಾ ಉಪಕರಣಗಳ ಆಮದು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮುಂದಾಗಿದೆ. ಅಲ್ಲದೇ ರಕ್ಷಣಾ ಉಪಕರಣಗಳ ಖರೀದಿಯಲ್ಲಿ ಶೇ.೬೮ರಷ್ಟನ್ನು ದೇಶೀಯ ಕೈಗಾರಿಕೆಗಳಿಗೆ ನೀಡಲು ಮುಂದಾಗಿರುವುದು ಐತಿಹಾಸಿಕ ಕ್ರಮವಾಗಿದೆ.
ತಂತ್ರಜ್ಞಾನ ಕ್ಷೇತ್ರಕ್ಕೆ ಆದ್ಯತೆಯನ್ನು ನೀಡುವ ಸಲುವಾಗಿ ಸ್ಮಾರ್ಟ್ ಆಪ್‌ಗಳ ವಿಸೃತ ತೆರಿಗೆ ಪ್ರಯೋಜನಗಳು ಈ ಬಾರಿ ಬಜೆಟ್‌ನಲ್ಲಿ ಲಭ್ಯವಿದ್ದು, ೨೦೧೬ ಏಪ್ರಿಲ್ ೧ರಿಂದ ಕಳೆದ ವರ್ಷ ಮಾರ್ಚ್ ೩೧ರವರೆಗೆ ಆರಂಭವಾದ ಆಪ್‌ಗಳು ಈ ಪ್ರಯೋಜನವನ್ನು ಪಡೆಯಲು ಅರ್ಹವಾಗಿವೆ. ಅಲ್ಲದೇ ಈ ಕ್ಷೇತ್ರವನ್ನು ಕೃಷಿ ವಲಯಕ್ಕೂ ವಿಸ್ತರಿಸಲಾಗಿದ್ದು, ಇದರ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ.
ನೈಸರ್ಗಿಕ ಕೃಷಿ ಜೊತೆಗೆ ಶೂನ್ಯ ಬಂಡವಾಳ ಹಾಗೂ ಸಾವಯವ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ.
ರೈಲ್ವೇ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಿಸಿದಂತೆ ಅತ್ಯಾಧುನಿಕ ಮತ್ತು ಐಷಾರಾಮಿಯಾದ ೪೦೦ ಒಂದೇ ಭಾರತ್ ರೈಲುಗಳನ್ನು ಮುಂದಿನ ೩ ವರ್ಷಗಳಲ್ಲಿ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಈ ರೈಲುಗಳು ಪ್ರಯಾಣಿಕರಿಗೆ ಉತ್ತಮ ಹಿತವನ್ನು ನೀಡಲಿದೆ. ಅಲ್ಲದೆ ಸಣ್ಣ ಉದ್ಯಮ ದಾರರು ಮತ್ತು ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಹೊಸ ಸೇವೆಗಳನ್ನು ರೈಲ್ವೇ ಇಲಾಖೆ ಪರಿಚಯಿಸಲಿದೆ.
೧೪ ವಲಯಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ೩೦ ಲಕ್ಷ ಕೋಟಿ ಹೆಚ್ಚಿನ ಉತ್ಪಾದನೆಯ ಗುರಿ ಹೊಂದಲಾಗಿದೆ. ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ. ಎಂದಾದರೂ ಇದೇ ಪ್ರಥಮ ಬಾರಿಗೆ ೨೫ ಸಾವಿರ ಕಿ.ಮೀ. ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸುವ ನಿಟ್ಟಿನಲ್ಲಿ ಗುರಿಯನ್ನು ಹೊಂದಲಾಗಿದೆ. ಅಲ್ಲದೇ ಈ ವರ್ಷವನ್ನು ಸಿರಿಧಾನ್ಯ ವರ್ಷವೆಂದು ಘೋಷಿಸಿರುವುದು ಮತ್ತೊಂದು ವಿಶೇಷ ಎಂದರು.
ಸುದ್ದಿಗೋಷ್ಟಿಯಲ್ಲಿ ಶಾಸಕ ಕೆ.ಬಿ.ಅಶೋಕ್‌ನಾಯ್ಕ್. ಬಿಜೆಪಿ ಜಿಲ್ಲಾ ಧ್ಯಕ್ಷ ಟಿ.ಡಿ.ಮೇಘರಾಜ್, ಎಸ್.ಎನ್.ಚನ್ನಬಸಪ್ಪ, ಸುನಿತಾ ಅಣ್ಣಪ್ಪ, ಮಧು ಸೂಧನ್, ಸೂಡಾಧ್ಯಕ್ಷ ನಾಗರಾಜ್, ಇನ್ನೂ ಮುಂತಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!