
ಶಿವಮೊಗ್ಗ,ಏ.೧೧: ಡಿಸಿ ಕಚೇರಿ ಎದುರು ಇರುವ ಆಟದ ಮೈದಾನಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಕೊಟ್ಟರೂ ಕೂಡ ಜಿಲ್ಲಾಧಿಕಾರಿಗಳು ನ್ಯಾಯಾಲಯಕ್ಕೆ ಹೋಗಿ ಎನ್ನುವುದು ಸರಿಯಲ್ಲ. ಕೂಡಲೇ ಇವರು, ವರ್ಗಾವಣೆಯಾಗಿ ಹೋಗಲಿ ಎಂದು ರಾಷ್ಟ್ರಭಕ್ತ ಬಳಗದ ಕೆ.ಎಸ್.ಈಶ್ವರಪ್ಪ ಜಿಲ್ಲಾಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಮಹಾನಗರ ಪಾಲಿಕೆಗೆ ಸೇರಿದ ಸರ್ಕಾರಿ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರಭಕ್ತ ಬಳಗವು ಹಲವು ದಾಖಲೆಗಳನ್ನು ನೀಡಿ, ಇದು ಈದ್ಗಾ ಮೈದಾನದ ಜಾಗವಲ್ಲ. ಸಾರ್ವಜನಿಕ ಜಾಗ, ಇಲ್ಲಿ ಉದ್ಯಾನವನ, ಕ್ರೀಡಾಂಗಣಮಾತ್ರ ಮಾಡಬೇಕಾಗಿದೆ. ಯಾವುದೇ ನಮಾಜ್ ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಪ್ಲ್ಯಾನ್ ಮಹಾನಗರ ಪಾಲಿಕೆ ಆಯುಕ್ತರೇ ಬರೆದಿರುವ ಪತ್ರ ಅಪೂರ್ಣ ಗೆಜೆಟ್ ಇವೆಲ್ಲವನ್ನು ನೀಡಿದೆ. ಆದರೂ ಕೂಡ ಜಿಲ್ಲಾಧಿಕಾರಿಗಳು ಈ ವಿವಾದವನ್ನು ನ್ಯಾಯಾಲಯದಲ್ಲಿ ತೀರ್ಮಾನಿಸಿ ಎಂದು ಹೇಳುತ್ತಿರುವುದು ಸರಿಯಲ್ಲ ಎಂದರು.

ಈಗ ರಾಷ್ಟ್ರಭಕ್ತ ಬಳಗವು ಇದರ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸುತ್ತದೆ. ಅಷ್ಟೇ ಅಲ್ಲ, ಹೈಕೋರ್ಟ್ಗೂ ಮತ್ತು ಲೋಕಾಯುಕ್ತರಿಗೂ ದೂರು ನೀಡುತ್ತೇವೆ. ನ್ಯಾಯಾಲಯದ ಮೊರೆ ಹೋಗುವುದು ನಮಗೆ ಅನಿವಾರ್ಯವಾಗಿದೆ. ಇನ್ನೂ ಮೂರು ದಿನಗಳ ಒಳಗಾಗಿ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು ಎಂದರು.
ನಮ್ಮ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ನೋಡೇ ಇಲ್ಲ, ಕಣ್ಣಿದ್ದರೂ ಅವರು ಕುರುಡರಾಗಿದ್ದಾರೆ. ಯಾವುದೋ ಪಕ್ಷದ ಹಿಂದೆ ಬಿದ್ದಿರುವ ಜಿಲ್ಲಾಧಿಕಾರಿಗಳು ಮಾಡುವ ಕುತಂತ್ರ ಇದು. ಅಕ್ರಮ ಖಾತೆಯನ್ನು ಮಾಡಿ ಕರ್ತವ್ಯ ಲೋಪ ಎಸಗಿರುವ ಮಹಾನಗರ ಪಾಲಿಕೆ ಕಂದಾಯ ಇಲಾಖೆಯ ಸಿಬ್ಬಂದಿಯವರ ಮೇಲೆ ಸೂಕ್ತ ತನಿಖೆ ನಡೆಸದೇ ಇರುವುದು ಅಕ್ಷಮ್ಯ ಹಾಗೂ ಕರ್ತವ್ಯಚ್ಯುತಿಯಾಗಿದೆ. ಮೊದಲು ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಕೋರ್ಟ್ನಲ್ಲಿ ಬಗೆಹರಿಸಿಕೊಳ್ಳಿ ಎಂದರೆ ಡಿಸಿ ಹಾಗಿ ಅವರು ಏಕೆ ಇರಬೇಕು. ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ, ಮುಂದಿನ ಹೋರಾಟದ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಈ ದಿನ ಕೂಡ ಜಿಲ್ಲಾಧಿಕರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಕೋರ್ಟ್ಗೆ ಹೋಗಿ ಎನ್ನುವುದೇ ತಪ್ಪು ಎಂದರು.
ಜಿಲ್ಲಾರಕ್ಷಣಾಧಿಕಾರಿಗಳು ಸಹ ರಾಷ್ಟ್ರಭಕ್ತ ಬಳಗ ನೀಡಿದ ದೂರನ್ನು ಗಮನಿಸಿಲ್ಲ. ರೈಲ್ವೆ ಇಲಾಖೆಯ ಕಂಬಿಗಳನ್ನು ತಂದು ಅಕ್ರಮವಾಗಿ ಬೇಲಿ ಹಾಕಿರುವುದರ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ಕೇಳಿದರೆ ನಮಗೆ ಯಾರು ದೂರು ಕೊಟ್ಟಿಲ್ಲ ಎನ್ನುತ್ತಾರೆ. ಬಾಂಗ್ಲಾ ದೇಶದ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಭಾಷಣ ಮಾಡಿದ್ದಕ್ಕೆ ಯಾರೂ ದೂರು ಕೊಡದಿದ್ದರೂ ಕೂಡ ಸುಮೋಟೋ ಕೇಸ್ ಹಾಕಲಿಲ್ಲವೇ. ಹಾಗೆಯೇ ಈಗಲೂ ಕೂಡ ಕೇಸ್ ದಾಖಲಿಸಿಕೊಳ್ಳಬೇಕು ಎಂದರು.

ಶಾಸಕರು ಸುಖಾಂತ್ಯ ಎಂದು ಹೇಳಿದ್ದಾರೆ ನಿಜ, ಆದರೆ ಡಿಸಿ ಮತ್ತು ಎಸ್ಪಿಯವರು ಅವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈಗ ಬೇರೊಂದು ಕತೆ ಹೇಳುತ್ತಿದ್ದಾರೆ. ರಾಷ್ಟ್ರಭಕ್ತ ಬಳಗ ಸುಮ್ಮನೆ ಕೂರುವುದಿಲ್ಲ. ನಮ್ಮ ಕಾನೂನಾತ್ಮಕ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು.
ಜಾತಿ ಗಣತಿ ವರದಿ ಮಂಡನೆ ಮಾಡಿ ಎಂದು ನಾನು ಒತ್ತಾಯಿಸುತ್ತಲೇ ಬಂದಿದ್ದೇ. ಮುಖ್ಯಮಂತ್ರಿ ಈಗ ಮಂಡನೆ ಮಾಡುತ್ತಿರುವುದು ಸ್ವಾಗತವಾಗಿದೆ. ಇದು ಸಾರ್ವಜನಿಕ ಚರ್ಚೆಯಾಗಬೇಕು. ಹಾಗೆಯೇ ಅನ್ವರ್ಮಾನಪಾಡಿ ವರದಿ ಕೂಡ ಚರ್ಚೆಯಾಗಬೇಕು ಎಂದರು.
ರಾಜ್ಯ ಗುತ್ತಿಗೆದಾರರ ಸಂಘವು ಕೂಡ, ರಾಜ್ಯ ಸರ್ಕಾರದ ಮೇಲೆ ಭ್ರಷ್ಟಚಾರದ ಆರೋಪ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಗುತ್ತಿಗೆದಾರರ ಸಂಘ ಯಾವ ಪಕ್ಷ ಕುಣಿಸಿತ್ತೋ ಹಾಗೆ ಕುಣಿಯುತ್ತಾರೇ ಎಂದ ಅವರು, ಹಿಂದೂತ್ವ ವಿಷಯದಲ್ಲಿ ಯತ್ನಾಳ್, ಸಿಟಿ ರವಿ, ಪ್ರತಾಪ ಸಿಂಹ ಎಲ್ಲರೂ ನನಗೆ ಒಂದೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಬಾಲು, ಸುವರ್ಣಶಂಕರ್, ಶ್ರೀಕಾಂತ್, ಮೋಹನ್ ಕುಮಾರ್ ಜಾದವ್, ಶಿವಾಜಿ, ಅನಿತಾ ಮಂಜುನಾಥ್, ರಾಧಾ ರಾಮಚಂದ್ರ, ಕುಬೇರಪ್ಪ, ಸೀತಾಲಕ್ಷ್ಮೀ, ರಾಜು ಮುಂತಾದವರು ಇದ್ದರು.