
ಶಿವಮೊಗ್ಗ, ಏ.೧೧: ರೈತರ ಜಮೀನುಗಳ ದಾಖಲೆಗಳನ್ನು ರದ್ದುಮಾಡಲು ನೋಟಿಸ್ ಕೊಟ್ಟಿರುವ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿವಮೊಗ್ಗ ಜಿಲ್ಲೆ ವತಿಯಿಂದ ಏ.೧೫ರ ಮಂಗಳವಾರ ಬೆಳಿಗ್ಗೆ ೧೦ಕ್ಕೆ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷರಾದ ಹೆಚ್.ಆರ್.ಬಸವರಾಜಪ್ಪ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಾವತಿ ಸಂತ್ರಸ್ಥ ರೈತರಿಗೆ ಬೇರೆ ಕಡೆ ಜಮೀನು ಸರ್ಕಾರ ಮಂಜೂರು ಮಾಡಿದ್ದು, ಕಂದಾಯ ಭೂಮಿ, ಗೋಮಾಳ ಭೂಮಿ, ಹುಲ್ಲುಬನ್ನಿ ಕರಾಬು ಜಮೀನುಗಳಲ್ಲಿ ಇತರೆಯವರಿಗೂ ಜಮೀನು ಮಂಜೂರು ಮಾಡಿದ್ದು, ಸುಮಾರು ೬೦-೭೦ ವರ್ಷಗಳಿಂದ ಸರ್ಕಾರದಿಂದ ಹಕ್ಕು ಪತ್ರ ಪಡೆದು ಖಾತೆ, ಪಹಣಿ, ದಾಖಲಾಗಿ ಪೋಡು ಮಾಡಿಸಿಕೊಂಡು, ನೆಮ್ಮದಿಯಿಂದ ತೋಟಗಳನ್ನು ಹಾಗೂ ಇತರೆ ಬೆಳೆಗಳನ್ನು ಬೆಳೆದು ಮನೆ ಕಟ್ಟಿಕೊಂಡು, ಬ್ಯಾಂಕ್ ವಗೈರೆಗಳಲ್ಲಿ ಸಾಲ ಪಡೆದು , ವ್ಯವಸಾಯ ಮಾಡುತ್ತಿದ್ದಾರೆ. ಕೆಲವು ರೈತರು ೩೦-೪೦ ವರ್ಷಗಳಿಂದ ಬಗರ್ಹುಕುಂ ಸಾಗುವಳಿ ಮಾಡುತ್ತಿದ್ದು, ಇನ್ನೂ ಹಕ್ಕುಪತ್ರಗಳನ್ನು ಕೊಟ್ಟಿರುವುದಿಲ್ಲ. ಶರಾವತಿ ಮುಳುಗಡೆ ರೈತರು ಮತ್ತು ಇತರೆ ರೈತರ ಜಮೀನುಗಳನ್ನು ಅರಣ್ಯ ಇಲಾಖೆಯವರ ಹೆಸರಿಗೆ ಇಂಡೀಕರಣ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರವೇ ಮಂಜೂರು

ಮಾಡಿದ ಜಮೀನುಗಳನ್ನು ಅರಣ್ಯ ಇಲಾಖೆಗೆ ಸೇರಿದ್ದು, ಈ ಜಮೀನುಗಳ ದಾಖಲೆಗಳನ್ನು ವಜಾ ಮಾಡಬೇಕೆಂದು ಉಪವಿಭಾಗ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಉಪವಿಭಾಗ ಅಧಿಕಾಇಗಳು ಸಾವಿರಾರು ರೈತರಿಗೆ ಜಮೀನು ತೆರವುಗೊಳಿಸಲು ನೋಟೀಸ್ ನೀಡುತ್ತಿದ್ದಾರೆ. ಇದರಿಂದ ಲಕ್ಷಾಂತರ ರೈತರು ಆತಂಕಕ್ಕೆ ಒಳಗಾಗಿದ್ದು, ಅನಾವಶ್ಯಕ ಕೋರ್ಟ್ಗಳಿಗೆ ಅಲೆದಾಡು ಪರಿಸ್ಥಿತಿ ಎದುರಾಗಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪ್ರತಿನಿಧಿಗಳು ಎಷ್ಟೇ ಭರವಸೆ ನೀಡಿದರೂ ಕೂಡ ರೈತರಲ್ಲಿ ಭಯ ಕಾಡುತ್ತಿದೆ. ಉಪವಿಭಾಗಾಧಿಕಾರಿಗಳು ಕೂಡ ನೋಟೀಸ್ ನೀಡಿ ದಾಖಲೆ ನೀಡುವಂತೆ ಒತ್ತಾಯಿಸುತ್ತಿದ್ದು, ಅರಣ್ಯ ಭೂಮಿ ಇಲ್ಲವಾದಲ್ಲಿ ನಾವು ಏನು ಮಾಡಲಾಗುವುದಿಲ್ಲ ಎಂದು ಬೆದರಿಕೆ ಹುಟ್ಟಿಸುತ್ತಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ರೈತರಿಗೆ ನೋಟಿಸ್ ನೀಡಬಾರದು. ರೈತರ ದಾಖಲೆಗಳನ್ನು ವಜಾ

ಮಾಡಬಾರದು. ರೈತರಿಗೆ ತಕ್ಷಣವೇ ಹಕ್ಕು ಪತ್ರ ಕೊಡಬೇಕು ಎಂದು ಒತ್ತಾಯಿಸಿ ಈ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಸಂತ್ರಸ್ಥ ಎಲ್ಲಾ ರೈತರು , ಅರಣ್ಯ ಹಕ್ಕು ಸಮಿತಿ ರೈತರು, ಎಲ್ಲಾ ಸಹಕಾರಿ ಸಂಘಟನೆಯ ಸದಸ್ಯರು, ರೈತ ಮಹಿಳೆಯರು ಮತ್ತು ರಾಜಕೀಯ ಪಕ್ಷದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹನುಮಂತ್,ಚಂದ್ರಪ್ಪ, ಹಾಲೇಶ್, ರಾಜು, ಎಚ್.ಎನ್.ನಾಗರಾಜು, ಹನುಮಂತಪ್ಪ, ಈಟ್ಟೂರು ರಾಜು, ರಫೀಕ್, ಉಮೆಶ್, ಮಹಾದೇವಪ್ಪ, ರುದ್ರೇಶ್ ಮೊದಲಾದವರಿದ್ದರು.