ಶಿವಮೊಗ್ಗ : ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಮಾಹಿತಿ ನೀಡದ ಕೆಪಿಸಿಎಲ್ ಅಧಿಕಾರಿಗಳ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಫುಲ್ ಗರಂ ಆದ ಘಟನೆ ಜರುಗಿತು.
ಅವರು ಇಂದು ಜಿಲ್ಲಾಧಿಕಾರಿ ಕಛೇರಿಯಲ್ಲಿ ರಾಷ್ಟ್ರಭಕ್ತರ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳು ಕೆಪಿಸಿಎಲ್ ಅಧಿಕಾರಿಗಳ ಜೊತೆ ಆಯೋಜಿಸಿದ್ದ ಜಂಟಿ ಸಭೆಯಲ್ಲಿ ಮಾತನಾಡಿ, ಫೆ.೭ರಂದು ಇಲ್ಲಿಯ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಪಂಪ್ಡ್ ಸ್ಟೋರೇಜ್ ಕುರಿತು ೩೨ ಪ್ರಶ್ನಾವಳಿಗಳನ್ನು ಸಲ್ಲಿಸಿ ಉತ್ತರ ಬಯಸಿದ್ದೆವು. ಆದರೆ ಇಂದಿಗೂ ಕೆಪಿಸಿಎಲ್ ಅಧಿಕಾರಿಗಳು ಅದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇಂದಿನ ಸಭೆಯಲ್ಲಿ ಹಾಜರಿದ್ದ ಕೆಪಿಸಿಎಲ್ ಅಧಿಕಾರಿಗಳಿಗೆ ತಾವು ಯಾವ ಮಾಹಿತಿಯನ್ನು ಹೊತ್ತು ತಂದಿದ್ದೀರಿ ಎಂದು ಈಶ್ವರಪ್ಪ ಪ್ರಶ್ನಿಸಿದಾಗ, ನಾವು ಎಂಡಿ ಜೊತೆ ಚರ್ಚಿಸಿ ಮುಂದಿನ ದಿನಾಂಕವನ್ನು ತಿಳಿಸಿ ಬಂದಿದ್ದೇವೆ ಎಂದಾಗ ಈಶ್ವರಪ್ಪ ಫುಲ್ ಗರಂ ಆಗಿ ಏನೂ ಮಾಹಿತಿ ಇಲ್ಲದೆ ನೀವು ಬಂದಿದ್ದಾದರೂ ಏಕೆ ? ಎಂದು ಸಿಡಿಮಿಡಿಗೊಂಡರು.

ಈಶ್ವರಪ್ಪ ಸ್ವತಃ ತಮ್ಮ ಮೊಬೈಲ್ನಿಂದ ಕೆಪಿಸಿಎಲ್ ಎಂಡಿ ಅವರಿಗೆ ಫೋನ್ ಮೂಲಕ ಮಾಹಿತಿ ಕೋರಿದಾಗ ಆಕಡೆಯಿಂದ ಅಧಿಕಾರಿಗೆ ಈಶ್ವರಪ್ಪ ಅವರು ಮಾತನಾಡುತ್ತಿದ್ದಾರೆ ಎಂಬುದೆ ತಿಳಿಯದೇ ‘ಪಂಪ್ಡ್ ಸ್ಟೋರೇಜ್ ಬಗ್ಗೆ ಯಾವುದೇ ಮಾಹಿತಿ ನೀಡಬೇಡಿ ಎಂದು ಎಂಡಿ ಆದೇಶಿಸಿದ್ದಾರೆ’ ಎಂಬ ಉತ್ತರ ಬಂದಿದ್ದನ್ನು ಕೇಳಿ ಈಶ್ವರಪ್ಪ ಕೆಲಕಾಲ ಅವಾಕ್ಕಾದರು. ನಾನು ಈಶ್ವರಪ್ಪ ಮಾತನಾಡುತ್ತಿರುವುದು. ನೀವು ಯಾರು ? ಎಂದು ಕೇಳಿದಾಗ ಫೋನ್ ಸ್ವಿಚ್ ಆಫ್ ಮಾಡಿದ್ದು ಈಶ್ವರಪ್ಪ ಅವರನ್ನು ಮತ್ತಷ್ಟು ಕೆರಳಿಸಿತು. ಪಂಪ್ಡ್ ಸ್ಟೋರೇಜ್ ಬಗ್ಗೆ ಮಾಹಿತಿಯನ್ನು ನ್ಯಾಯಾಲಯದ ಮೂಲಕ ಪಡೆದುಕೊಳ್ಳುವುದಾಗಿ ಆಕ್ರೋಶಭರಿತರಾದರು.
ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ತಜ್ಞರ ಸಮಿತಿಯೊಂದು ಪಂಪ್ಡ್ ಸ್ಟೋರೇಜ್ ಪ್ರದೇಶಕ್ಕೆ ಭೇಟಿನೀಡಿ, ವಾಸ್ತವ ಸ್ಥಿತಿ ಪರಿಶೀಲಿಸಿ ಶರಾವತಿ ಕಣಿವೆಯಲ್ಲಿ ಇಂತಹ ಯೋಜನೆಗಳು ಕಾರ್ಯ ಸಾಧುವಲ್ಲ, ವನ್ಯಜೀವಿ ಸಂಪತ್ತು ಹೊಂದಿರುವ ಇಂತಹ ಪ್ರದೇಶಗಳಲ್ಲಿ ಪರ್ಯಾಯ ಮಾರ್ಗ ಶೋಧನೆಗೆ ಶಿಫಾರಸ್ಸು ಮಾಡಿದ್ದಾರೆ. ಇವರ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ನೋಡಬೇಕು ಎಂದರು.
ಸಿಲಿಂಡರ್ ಗ್ಯಾಸ್ ಅಭಾವಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ದೇಶದಲ್ಲಿ ಗ್ಯಾಸ್ ಸಿಲಿಂಡರ್ಗೆ ಅಭಾವವಿಲ್ಲ. ಪ್ರಸ್ತುತ ಕಾಣುತ್ತಿರುವ ಕೊರತೆ ‘ಕೃತಕ ಅಭಾವ’ಎಂದ ಅವರು, ರಾಜ್ಯದಲ್ಲಿ ಸಿಲಿಂಡರ್ ಗ್ಯಾಸ್ ಕೊರತೆ ಇಲ್ಲ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಪಂಪ್ಡ್ ಸ್ಟೋರೇಜ್ ಕುರಿತಂತೆ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ನಾವು ಆ ಕುರಿತು ಏನೂ ಹೇಳಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪನ್ನು ಕಾಯೋಣ ಎಂದರು.
ಪರಿಸರ ಹೋರಾಟಗಾರ ಡಾ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ನಾಲ್ಕು ತಿಂಗಳ ಹಿಂದೆಯೇ ಕಾರ್ಗಲ್ನಲ್ಲಿ ನಡೆದ ಸಾರ್ವಜನಿಕ ಅಹವಾಲು ಸಭೆಯಲ್ಲಿ ಸಲ್ಲಿಕೆಯಾಗಿದ್ದ ದೂರು, ಸಲಹೆಗಳಿಗೆ ಸಂಬಂಧಿಸಿದಂತೆ ತಕ್ಷಣದಲ್ಲಿಯೇ ಉತ್ತರಿಸುವುದಾಗಿ ಅಂದಿನ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭರವಸೆ ನೀಡಿದ್ದರು. ಆದರೆ ಅಂದು ಸಲ್ಲಿಕೆಯಾದ ಮಾಹಿತಿಗಳಿಗೆ ಇಂದಿನವರೆಗೂ ಕೆಪಿಸಿಎಲ್ನಿಂದ ಯಾವುದೇ ಉತ್ತರ ಬಂದಿಲ್ಲ. ಅವೆಲ್ಲವೂ ಕೇವಲ ನಾಮಕಾವಸ್ಥೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಫೆ.೭ರಂದು ಪ್ರತಿಭಟನೆಯ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗಳಿಗೂ ಯಾವುದೇ ಉತ್ತರವಿಲ್ಲ ಎಂದು ಕಿಡಿಕಾರಿದರು.
ಸಭೆಯಲ್ಲಿ ರಾಷ್ಟ್ರಭಕ್ತ ಬಳಗದ ಕೆ.ಈ. ಕಾಂತೇಶ್, ಕೆಪಿಸಿಎಲ್(ಕಾರ್ಗಲ್) ಕಾರ್ಯಪಾಲಕ ಅಭಿಯಂತರರಾದ ಉಮಾಪತಿ, ಸಂಯೋಜಕ ಸಿದ್ಧರಾಜು ಕೆ.ಎಸ್., ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಪರಿಸರ ಹೋರಾಟಗಾರ ಡಾ.ಬಿ.ಎಂ. ಕುಮಾರಸ್ವಾಮಿ, ಡಾ.ಎಲ್.ಕೆ.ಶ್ರೀಪತಿ, ಎಸ್.ಬಿ. ಅಶೋಕ್ಕುಮಾರ್, ಶ್ರೀಕಾಂತ್ ಮೊದಲಾದವರಿದ್ದರು.