20 ಜುಲೈ 2026ರವರೆಗೆ, ಕರ್ನಾಟಕದಲ್ಲಿ 22,500ಕ್ಕೂ ಹೆಚ್ಚು ಮೇಲ್ಛಾವಣಿ ಸೌರ ಸ್ಥಾಪನೆಗೊಂಡಿವೆ ಎಂದು ಮಾಹಿತಿ ನೀಡಿರುವ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ನವದೆಹಲಿ, 22 ಜುಲೈ 2026: ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರಿಸಿರುವ, ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು, ಪ್ರಧಾನ ಮಂತ್ರಿ ಸೂರ್ಯ ಘರ್ – ಉಚಿತ ವಿದ್ಯುತ್ ಯೋಜನೆಯು 39,38,805 ಮೇಲ್ಛಾವಣಿ ಸೌರ (ಆರ್ಟಿಎಸ್) ಸ್ಥಾಪನೆಗಳ ಮೂಲಕ ದೇಶಾದ್ಯಂತ 47,64,657 ಮನೆಗಳಿಗೆ ಪ್ರಯೋಜನವಾಗಿದೆ ಎಂದು ಹೇಳಿದೆ. 2026-27ರ ಹಣಕಾಸು ವರ್ಷದ ವೇಳೆಗೆ ಒಂದು ಕೋಟಿ ಮನೆಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿರುವ ಈ ಯೋಜನೆಯಡಿಯಲ್ಲಿ, ಕೇಂದ್ರ ಹಣಕಾಸು ನೆರವು (ಸಿಎಫ್ಎ) 27,323.55 ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ವಿತರಿಸಿದೆ.

ಈ ಯೋಜನೆಯಡಿ ಕರ್ನಾಟಕದಲ್ಲಿ 60,973 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ 22,519 ಮೇಲ್ಛಾವಣಿ ಸೌರಶಕ್ತಿ ಸ್ಥಾಪನೆಗಳು 34,180 ಮನೆಗಳಿಗೆ ಪ್ರಯೋಜನವನ್ನು ನೀಡಿವೆ ಮತ್ತು ಒಟ್ಟು 91.64 ಮೆಗಾವ್ಯಾಟ್ ಮೇಲ್ಛಾವಣಿ ಸೌರಶಕ್ತಿಯನ್ನು ಅಳವಡಿಸಲಾಗಿದೆ. ಕೇಂದ್ರ ಹಣಕಾಸು ನೆರವಿನ ರೂಪದಲ್ಲಿ 163.44 ಕೋಟಿ ರೂ.ಗಳನ್ನು ರಾಜ್ಯದಲ್ಲಿ ಫಲಾನುಭವಿಗಳು ಪಡೆದಿದ್ದಾರೆ ಎಂದು ಮಾಹಿತಿ ನೀಡಿದೆ.

ರಾಜ್ಯದಲ್ಲಿ ಜಿಲ್ಲೆಗಳ ಪೈಕಿ, ಬೆಂಗಳೂರು ನಗರವು 8,151 ಸ್ಥಾಪನೆಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ದಕ್ಷಿಣ ಕನ್ನಡ (2,708) ಮತ್ತು ಮೈಸೂರು (1,819) ನಂತರದ ಸ್ಥಾನದಲ್ಲಿವೆ. ಗ್ರಾಮೀಣ ಮೇಲ್ಛಾವಣಿ ಸೌರಶಕ್ತಿ ಅಳವಡಿಕೆಯನ್ನು ವೇಗಗೊಳಿಸಲು, ಸಚಿವಾಲಯವು ಕರ್ನಾಟಕದಾದ್ಯಂತ 12 ಜಿಲ್ಲೆಗಳಲ್ಲಿ 12 ಮಾದರಿ ಸೌರಶಕ್ತಿ ಗ್ರಾಮಗಳನ್ನು ಘೋಷಿಸಿದ್ದು, ರಾಜ್ಯದ ಮಾದರಿ ಸೌರ ಗ್ರಾಮ ಅನುಷ್ಠಾನ ಸಂಸ್ಥೆಗೆ ಸೇವಾ ಶುಲ್ಕವಾಗಿ 20 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದಿದೆ.
“ಪ್ರಧಾನಮಂತ್ರಿ ಸೂರ್ಯ ಘರ್ – ಉಚಿತ ವಿದ್ಯುತ್ ಯೋಜನೆಯು ಆದರಣೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ರವರ ಶುದ್ಧ ಇಂಧನವನ್ನು ಕೈಗೆಟುಕುವಂತೆ ಮತ್ತು ಪ್ರತಿ ಮನೆಗೂ ತಲುಪಿಸುವಂತೆ ಮಾಡುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ” ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ. ಈ ಯೋಜನೆಯು ಭಾರತದ ಶುದ್ಧ ಇಂಧನ ಭವಿಷ್ಯವನ್ನು ಬಲಪಡಿಸುವುದರ ಜೊತೆಗೆ ಕುಟುಂಬಗಳಿಗೆ ವಿದ್ಯುತ್ ಬಿಲ್ಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಂಸದರು ತಿಳಿಸಿದ್ದಾರೆ.